ಹಾನಗಲ್ಲ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೂಳೆತ್ತಲಾದ ಚುಂಚಲಕಟ್ಟಿ ಕೆರೆಯನ್ನುlakes ಶಾಸಕ ಶ್ರೀನಿವಾಸ ಮಾನೆ ಸಮುದಾಯಕ್ಕೆ ಹಸ್ತಾಂತರಿಸಿದರು.
ಹಾನಗಲ್ಲ: ಕೆರೆ-ಕಟ್ಟೆಗಳು lakes ಮತ್ತು ಜಲ ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರದ ಹಿತದೃಷ್ಟಿಯಿಂದ ಮುಂದಿನ ಜನ ಸಮುದಾಯಕ್ಕೆ ನೀರು ಉಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಮ್ಮೂರು-ನಮ್ಮ ಕೆರೆ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಲಾದ ಚುಂಚಲಕಟ್ಟಿ ಕೆರೆಯನ್ನು ಶುಕ್ರವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ಕಾಲ ಬದಲಾದಂತೆ ಕೆರೆ, ಕಟ್ಟೆಗಳನ್ನು ಮುಚ್ಚಲಾಗುತ್ತಿದೆ. ಕಾಲುವೆಗಳನ್ನು ಅತಿಕ್ರಮಿಸಿ ನೀರು ಸರಾಗವಾಗಿ ಹರಿದು ಜಲಮೂಲ ಸೇರುವುದನ್ನು ತಡೆಯಲಾಗಿದೆ. ನೀರಿನ ಅಪವ್ಯಯವೂ ಹೆಚ್ಚುತ್ತಿದೆ. ಇವೆಲ್ಲ ಕಾರಣಗಳಿಂದ ಸಂಕಷ್ಟ ತಲೆದೋರಿದೆ. ಸಮಸ್ಯೆ ಸೃಷ್ಟಿಯಾದ ಸಂದರ್ಭದಲ್ಲಿ ವ್ಯಥೆ ಪಡುವ ಬದಲಿಗೆ ನೀರಿನ ವಿಷಯದಲ್ಲಿ ಸಮಸ್ಯೆ ಸೃಷ್ಟಿಯಾಗದಂತೆ ಜಾಗರೂಕತೆ ವಹಿಸಬೇಕಿದೆ ಎಂದರು.
ಧಗ್ರಾ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಮಾತನಾಡಿ, ಕಳೆದ 15, 16 ವರ್ಷಗಳ ಹಿಂದೆ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆ ಜಾರಿಗೆ ಬಂದಿದ್ದು, ರಾಜ್ಯವ್ಯಾಪಿ ಇದುವರೆಗೆ 997 ಕೆರೆಗಳನ್ನು ಹೂಳೆತ್ತಿ ಜೀರ್ಣೋದ್ಧಾರಗೊಳಿಸಲಾಗಿದೆ. ಈ ಪೈಕಿ ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಒಟ್ಟು 48 ಕೆರೆಗಳನ್ನು ಸಂರಕ್ಷಿಸಲಾಗಿದೆ ಎಂದರು.
ಧಗ್ರಾ ಯೋಜನೆಯ ಯೋಜನಾಧಿಕಾರಿ ರಘುರಾಮ್ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ವಾಸುದೇವ ಮೂಡಿ, ನಾರಾಯಣ ಬಿ., ಪಿಡಿಒ ರಾಮಣ್ಣ ಹನಕನಹಳ್ಳಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ ಕುಲಕರ್ಣಿ, ಸದಸ್ಯ ಗಂಗಾಧರ ಪ್ಯಾಟಿ, ಉದ್ಯಮಿ ಸಿದ್ದಲಿಂಗಪ್ಪ ಕಮಡೊಳ್ಳಿ, ರವಿ ಮ್ಯಾಗೇರಿ, ಕೆ.ಎಸ್. ಕೋರಿಶೆಟ್ಟರ, ನಿಂಗರಾಜ ಮಾಳವಾಡ ಇತರರು ಇದ್ದರು.