Power problem ವರದಾ ನದಿಯಲ್ಲಿ ನೀರು ಹರಿಯುತ್ತಿರುವುದು ಹಾಗೂ ಪಕ್ಕದಲ್ಲಿರುವ ಬಾಳಂಬೀಡ ಏತ ನೀರಾವರಿ ಯೋಜನೆ ಪಂಪ್​ಹೌಸ್. 
ಹಾವೇರಿ

Power problem ಬಾಳಂಬೀಡ ಏತ ನೀರಾವರಿ ಯೋಜನೆಗೆ ವಿದ್ಯುತ್ ಸಮಸ್ಯೆ

ವಿವೇಕಾನಂದ ದಾಸನಕೊಪ್ಪ
ಹಾನಗಲ್ಲ: ವಿದ್ಯುತ್ ಸಮಸ್ಯೆಯಿಂದಾಗಿ (Power problem) ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ಕೆರೆಗೆ ನೀರು ಹರಿಸುವ ಕಾರ್ಯ ಮತ್ತೆ ಸ್ಥಗಿತವಾಗಿದೆ. ಕಳೆದ 10 ದಿನಗಳ ಹಿಂದಿನ ಸಮಸ್ಯೆ ಪುನಃ ತಲೆದೋರಿದೆ.
ಸವಣೂರ ಹಲಸೂರ 110 ಕೆವಿ ಗ್ರಿಡ್​ನಿಂದ ಟವರ್​ಗಳ ಮೂಲಕ ಬಾಳಂಬೀಡದ ಪಂಪ್​ಹೌಸ್​ಗೆ ನೇರವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ವಿದ್ಯುತ್ ಟವರ್​ಗಳಲ್ಲಿರುವ ಬ್ರೇಕರ್​ಗಳಲ್ಲಿ ಪದೇಪದೆ ತಂತಿ ಕರಗುವಿಕೆಯಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗುತ್ತಿದೆ. ಹಲಸೂರಿನಿಂದ ಬಾಳಂಬೀಡದ ಪಂಪ್​ಹೌಸ್​ವರೆಗೆ ಸುಮಾರು 50 ಟವರ್​ಗಳಿವೆ. ಈ ಟವರ್​ಗಳನ್ನು ಏರಿ ಪರಿಶೀಲಿಸಬೇಕು. ಹೀಗಾಗಿ, ದೋಷ ಹುಡುಕುವುದೇ ಸವಾಲಾಗಿದೆ.
ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸುವಂತೆ ಕೆಲ ದಿನಗಳ ಹಿಂದೆ ರೈತರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಶಾಸಕ ಶ್ರೀನಿವಾಸ ಮಾನೆ ಅವರು ಅಧಿಕಾರಿಗಳ ಸಭೆ ಕರೆದು, ನೀರು ಹರಿಸುವ ಕಾರ್ಯದಲ್ಲಿ ವಿಳಂಬ ಸಲ್ಲದು ಎಂದು ಸೂಚಿಸಿದ್ದರು. ಇದಾದ ನಂತರ ನೀರು ಹರಿಸಲು ಚಾಲನೆ ನೀಡಲಾಗಿತ್ತು. ಇನ್ನೂ ಯೋಜನೆ ವ್ಯಾಪ್ತಿಯ ಬಹಳಷ್ಟು ಕೆರೆಗಳಿಗೆ ನೀರು ತಲುಪಿಲ್ಲ. ಕೆಲ ಕೆರೆಗಳಿಗೆ ಸ್ವಲ್ಪ ಪ್ರಮಾಣದ ನೀರು ಹರಿದಿದೆ. 
ಶಿವಮೊಗ್ಗ ಹಾಗೂ ಕಾರವಾರ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಸದ್ಯ ವರದಾ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದೆ. ಆದರೆ, ವಿದ್ಯುತ್ ಸಮಸ್ಯೆಯಿಂದಾಗಿ ಕೆರೆಗಳಿಗೆ ನೀರು ಹರಿಸುವಿಕೆ ಸ್ಥಗಿತವಾಗಿದೆ.
ರೈತರಿಗೆ ಆಶ್ರಯವಾಗಬೇಕಾದ ಬಾಳಂಬೀಡ ಏತ ನೀರಾವರಿ ಯೋಜನೆ, ಬರಗಾಲದ ಸಮಯದಲ್ಲೇ ನೆರವಿಗೆ ಬಾರದಿರುವುದು ಆತಂಕ ಮೂಡಿಸಿದೆ. ಬೃಹತ್ ನೀರಾವರಿ ಇಲಾಖೆ ಹಾಗೂ ಬಾಳಂಬೀಡ ಏತ ನೀರಾವರಿ ಯೋಜನೆ ನಿರ್ವಹಣೆ ಗುತ್ತಿಗೆದಾರರ ನಡುವೆ ಸಮನ್ವಯದ ಕೊರತೆಯೂ ಎದ್ದು ಕಾಣುತ್ತಿದೆ. ಈ ವರ್ಷ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಇಂತಹ ಅಡಚಣೆಗಳು ಉಂಟಾಗುತ್ತಿವೆ ಎಂದು ರೈತರು ಕಿಡಿ ಕಾರುತ್ತಿದ್ದಾರೆ.
ಹಾವೇರಿ ಕೆಪಿಟಿಸಿಎಲ್ 220 ಕೆವಿ ವಿದ್ಯುತ್ ವಿತರಣೆ ಘಟಕದ ಇಇ ವಿಜಯ ಜೋಶಿ ಅವರು ಜು. 25ರಂದು ಹಾನಗಲ್ಲ ಬೃಹತ್ ನೀರಾವರಿ ಇಲಾಖೆ ಎಇಇ ಹಾಗೂ ಬಾಳಂಬೀಡ ಏತ ನೀರಾವರಿ ಯೋಜನೆ ಗುತ್ತಿಗೆದಾರರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಇಬ್ಬರ ಮಧ್ಯೆ ಸಮನ್ವಯದ ಕೊರತೆ ಇರುವುದು ಕಂಡುಬಂದಿದೆ. ವಿಜಯ ಜೋಶಿ ಅವರು ಜು. 27ರಂದು ಖುದ್ದಾಗಿ ಬಾಳಂಬೀಡ ಏತ ನೀರಾವರಿ ಯೋಜನೆ ಘಟಕ ಹಾಗೂ ವಿದ್ಯುತ್ ವಿತರಣೆ ಘಟಕಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
"

ಕಳೆದ ಎರಡು ದಿನಗಳಿಂದ ಮತ್ತೆ ವಿದ್ಯುತ್ ಸಮಸ್ಯೆ ಕಾರಣದಿಂದ ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. 40 ವಿದ್ಯುತ್ ಟವರ್​ಗಳನ್ನು ಪರೀಕ್ಷಿಸಲಾಗಿದೆ. ಇನ್ನೂ 15 ಟವರ್ ಪರೀಕ್ಷಿಸಬೇಕಾಗಿದೆ. ಭಾನುವಾರ ನೀರು ಹರಿಸುವಿಕೆ ಆರಂಭ ಮಾಡುವ ಯತ್ನ ನಡೆದಿದೆ.| ಎನ್. ಗಿರೀಶ, ಬೃಹತ್ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್.




"

ವಿದ್ಯುತ್ ಸಮಸ್ಯೆ ಎಂದು ಬಾಳಂಬೀಡ ಏತ ನೀರಾವರಿ ಯೋಜನೆಯಿಂದ ಕೆರೆಗೆ ನೀರು ಹರಿಸುವಿಕೆ ಮತ್ತೆ ಬಂದ್ ಆಗಿದೆ. ಇಲಾಖೆ ಮುಂಗಾರು ಮಳೆ ಪೂರ್ವದಲ್ಲಿಯೇ ಸಿದ್ಧತೆ ಮಾಡಿಕೊಳ್ಳದಿರುವುದೇ ಸಮಸ್ಯೆಗೆ ಕಾರಣ. ಆದರೆ, ಈಗ ಅಧಿಕಾರಿಗಳು ವಿದ್ಯುತ್ ಕಾರಣ ಹೇಳುತ್ತಿದ್ದಾರೆ. ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಿದಾಗ ಅಧಿಕಾರಿಗಳು ಎಲ್ಲವೂ ಸರಿ ಇದೆ ಎನ್ನುತ್ತಾರೆ. ಆದರೆ, ಯಾವ ವ್ಯವಸ್ಥೆಯೂ ಸರಿಯಾಗಿಲ್ಲ ಎಂಬುದಂತೂ ಸತ್ಯ. 

| ಮರಿಗೌಡ ಪಾಟೀಲ, ರೈತ ಸಂಘದ ತಾಲೂಕು ಅಧ್ಯಕ್ಷ.