ರಾಣೆಬೆನ್ನೂರು: ನಗರದ ಹಳೇ ಪಿ.ಬಿ. ರಸ್ತೆಯ ಮೃತ್ಯುಂಜಯ ನಗರದ ಆರ್.ಬಿ. ಸೂಪರ್ ಮಾರ್ಕೇಟ್ ಮೇಲೆ ದಾಳಿ ನಡೆಸಿದ ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ ನೇತೃತ್ವದ ತಂಡ ಬರೋಬ್ಬರಿ 50 ಕೆ.ಜಿ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ವಶಪಡಿಸಿಕೊಂಡು 15 ಸಾವಿರ ರೂ. ದಂಡ ವಿಧಿಸಿದ್ದಾರೆ.
ಇವರು ತಮ್ಮ ಮಳಿಗೆಯಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ಗಳನ್ನು ನೀಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು, ಮಳಿಗೆಯಿಂದ 50 ಕೆ.ಜಿ.ಯಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ನಿಯಮ ಉಲ್ಲಂನೆ ಆರೋಪದಡಿ 15 ಸಾವಿರ ರೂ. ದಂಡ ವಿಧಿಸಿದ್ದಾರೆ.
ಈ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆಯುಕ್ತ ಕ್ಕೀರಪ್ಪ ಇಂಗಳಗಿ, ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಷೇಧಿತ ಪ್ಲಾಸ್ಟಿಕ್ ಅನ್ನು ಯಾರೂ ಬಳಸುವಂತಿಲ್ಲ. ಕಿರಾಣಿ ಅಂಗಡಿ, ಸೂಪರ್ ಮಾರ್ಕೇಟ್, ಸ್ಟೇಷನರಿ ಸೇರಿ ಪ್ರತಿಯೊಂದು ಅಂಗಡಿಯವರು ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.