ಹಾನಗಲ್ಲ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಭಾರತೀಯ ಕೃಷಿ ಕಾರ್ವಿುಕ ರೈತ ಸಂಘಟನೆ ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ವಿಠಲ್ ಚೌಗುಲಾ ಅವರಿಗೆ ಮನವಿ ಸಲ್ಲಿಸಿತು.
ಹಾನಗಲ್ಲ: ರಾಜ್ಯ ಸರ್ಕಾರದ ವಿದ್ಯುತ್ ಕಂಪನಿ ಖಾಸಗೀಕರಣ ವಿರೋಧಿಸಿ ಭಾರತೀಯ ಕೃಷಿ ಕಾರ್ವಿುಕ ರೈತ ಸಂಘಟನೆ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ವಿದ್ಯುತ್ ಖಾಸಗೀಕರಣದಿಂದ ಮೊಬೈಲ್ನಂತೆ ಕರೆನ್ಸಿ ಹಾಕಿ ವಿದ್ಯುತ್ ಬಳಸಬೇಕಾಗುತ್ತದೆ. ನೀರಾವರಿ ಪಂಪ್ಸೆಟ್ ಬಳಕೆದಾರರಿಗೆ ತೊಂದರೆಯಾಗಲಿದೆ. ಹಣ ಕೊಟ್ಟರೆ ಮಾತ್ರ ವಿದ್ಯುತ್ ಕೊಡುತ್ತೇವೆ ಎಂದು ಹೇಳುವ ಕಾಲ ಸನ್ನಿಹಿತವಾಗುತ್ತಿದೆ. ಸರ್ಕಾರ ವಿದ್ಯುತ್ ಖಾಸಗೀಕರಣ ರದ್ದುಗೊಳಿಸಬೇಕು.ರೈತರ ಪಂಪ್ಸೆಟ್ಗಳಿಗೆ ಉಚಿತ ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ಹೊಸದಾಗಿ ಕೊರೆಸಿದ ರೈತರ ಕೊಳವೆಬಾವಿಗಳಿಗೆ ವಿಳಂಬವಿಲ್ಲದೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ಕಂಪನಿಗೆ ಈಗಾಗಲೇ 19 ಜಿಲ್ಲೆಗಳಲ್ಲಿ ವಿದ್ಯುತ್ ನಿರ್ವಹಣೆ ಹೊಣೆ ವಹಿಸುವ ಪ್ರಕ್ರಿಯೆ ನಡೆದಿದೆ. ಇದು ರೈತರು, ಬಡವರ ಮೇಲೆ ಆರ್ಥಿಕ ಹೊರೆ (financial burden) ಹೇರುವ ಹುನ್ನಾರ. ಇದರಿಂದ ಮೊಬೈಲ್ ರಿಚಾರ್ಜ್ನಂತೆ ವಿದ್ಯುತ್ ಖರೀದಿಸುವ ಸನ್ನಿವೇಶ ಬರುತ್ತದೆ. ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕಡಿತವಾಗುತ್ತದೆ. ವಿದ್ಯುತ್ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರನ್ನು ಬೀದಿಗೆ ಬೀಳಲಿದ್ದಾರೆ. ಆದ್ದರಿಂದ ವಿದ್ಯುತ್ ಕಂಪನಿಗಳ ಖಾಸಗೀಕರಣ ಕೈಬಿಡಬೇಕು ಎಂದು ಮನವಿಯಲ್ಲಿ ರೈತ ಸಂಘಟನೆ ಒತ್ತಾಯಿಸಿದೆ.
ಸಂಘಟನೆ ತಾಲೂಕು ಅಧ್ಯಕ್ಷ ಎಂ.ಎಸ್. ಪಾಟೀಲ, ಮಹಲಿಂಗಪ್ಪ ಬಿದರಮಳಿ, ಶೀಲಾ ಭದ್ರಾವತಿ, ನಶೀಮಾಬಾನು ಲೋಹಾರ, ಚನ್ನಬಸಯ್ಯ ದೊಡ್ಡಕಂತಿಮಠ, ರವಿರಾಜ ರಾಗಿಕೊಪ್ಪ, ಅದಮಖಾನ ನೆಗಳೂರ, ನಾಗಪ್ಪ ಬಿದರಗಡ್ಡಿ, ಶಿವನಗೌಡ ಪಾಟೀಲ, ಚನ್ನಬಸಪ್ಪ ಅಂಗಡಿ, ಮಂಜು ಹರಿಜನ, ಎಂ.ಎಂ. ಗುಲಾಮಲಿಶಾ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಮೊದಲಾದವರು ಇದ್ದರು.