ರಾಣೆಬೆನ್ನೂರು: ನಗರದ ಬನಶಂಕರಿ ಬಡಾವಣೆಯ ಸಮೀಪದ ಸೇವಾಲಾಲ್ ಸ್ಕೂಲ್ ಪಕ್ಕದಲ್ಲಿ ನಿಮಿರ್ಸಲಾಗಿರುವ ಹೊಸ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯ ತಾಣವಾಗಿ ಮಾರ್ಪಟ್ಟಿದೆ. ಉದ್ಯಾನವನದ ಸುತ್ತಲೂ ಕಸ ತುಂಬಿಕೊಂಡಿದ್ದು, ಚರಂಡಿ ನೀರು ಉದ್ಯಾನವನದೊಳಗೆ ಹರಿದು ಬಂದು ಕೊಳಚೆ ಸಂಗ್ರಹವಾಗುತ್ತಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಉದ್ಯಾನವನಕ್ಕೆ ಸೂಕ್ತ ಪ್ರವೇಶ ದ್ವಾರ (ಗೇಟ್) ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಇದರ ಪರಿಣಾಮವಾಗಿ ಉದ್ಯಾನವನದ ಆವರಣದಲ್ಲಿ ಪ್ಲಾಸ್ಟಿಕ್, ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸ ತುಂಬಿ ತುಳುಕುತ್ತಿದೆ. ಸ್ವಚ್ಛತೆ ಹಾಗೂ ನಿರ್ವಹಣೆಯ ಕೊರತೆಯಿಂದ ಉದ್ಯಾನವನದ ಸೌಂದರ್ಯ ಸಂರ್ಪೂಣ ಹಾಳಾಗಿದ್ದು, ಸಾರ್ವಜನಿಕರ ಬಳಕೆಗೆ ಅಯೋಗ್ಯವಾಗುತ್ತಿದೆ.
ಇದರ ಜೊತೆಗೆ, ಉದ್ಯಾನವನದ ಸಮೀಪದ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಪರಿಣಾಮ ಕೊಳಚೆ ನೀರು ಉದ್ಯಾನವನದೊಳಗೆ ನುಗ್ಗುತ್ತಿದೆ. ಮಳೆ ಬಂದ ಸಂದರ್ಭದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತಿದ್ದು, ಉದ್ಯಾನವನದೊಳಗೆ ನೀರು ನಿಂತು ಕೆಸರು ಹಾಗೂ ಕೊಳಚೆ ತಾಣವಾಗಿ ಪರಿವರ್ತನೆಯಾಗುತ್ತಿದೆ. ಇದರಿಂದ ದುರ್ವಾಸನೆ ಬೀರುವುದರ ಜತೆಗೆ ಸೊಳ್ಳೆ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಮಕ್ಕಳು, ವೃದ್ಧರಿಗೆ ತೊಂದರೆ...
ಉದ್ಯಾನವನವನ್ನು ಸಾರ್ವಜನಿಕರ ಆರೋಗ್ಯ ಹಾಗೂ ಮನರಂಜನೆಗಾಗಿ ನಿಮಿರ್ಸಲಾಗಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳು ಹಾಗೂ ವೃದ್ಧರು ಇಲ್ಲಿ ಕಾಲಿಡಲು ಹಿಂದೇಟು ಹಾಕುವಂತಾಗಿದೆ. ಮಳೆಗಾಲದಲ್ಲಿ ನೀರು ನಿಂತು ಕೆಸರುಮಯವಾಗುವುದರಿಂದ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕ್ರಮಕ್ಕೆ ಒತ್ತಾಯ...
ಸಂಬಂಧಿಸಿದ ನಗರಸಭೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಉದ್ಯಾನವನದಲ್ಲಿರುವ ಕಸ ತೆರವುಗೊಳಿಸಬೇಕು. ಚರಂಡಿ ನೀರು ಉದ್ಯಾನವನದೊಳಗೆ ನುಗ್ಗದಂತೆ ಸೂಕ್ತ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಉದ್ಯಾನವನಕ್ಕೆ ಗೇಟ್ ಅಳವಡಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಬೇಕು. ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಂಡು ಉದ್ಯಾನವನ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.