ರಟ್ಟಿಹಳ್ಳಿ ತಾಲೂಕಿನ ಹಿರೇಮಾದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ school ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು.
ರಟ್ಟಿಹಳ್ಳಿ: ಕಳೆದ ಎರಡು ವರ್ಷದಿಂದ ಶಿಕ್ಷಕರ ಕೊರತೆ ಇರುವ ಕಾರಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿ ಪಾಲಕರು ವಿದ್ಯಾರ್ಥಿಗಳನ್ನು ಶಾಲೆಯಿಂದ school ಮನೆಗೆ ಕರೆದುಕೊಂಡು ಹೋದ ಘಟನೆ ತಾಲೂಕಿನ ಹಿರೇಮಾದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ.
ಒಬ್ಬ ಶಿಕ್ಷಕ ಎರಡು ತಿಂಗಳಿಂದ ಅನಾರೋಗ್ಯದಿಂದಾಗಿ ಶಾಲೆಗೆ ಬಂದಿಲ್ಲ. 2 ವರ್ಷದಿಂದ ಮಕ್ಕಳಿಗೆ ಶಿಕ್ಷಕರ ಕೊರತೆ ಇರುವ ಕಾರಣ ಸರಿಯಾಗಿ ಪಾಠಗಳನ್ನು ಮಾಡದ್ದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ. ಶಿಕ್ಷಣ ಇಲಾಖೆ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಸಬೇಕು ಅಲ್ಲಿಯವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಾಲಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋದರು.
ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಬೆಳ್ಳೂರು ಮಾತನಾಡಿ, ಗ್ರಾಮದ ಶಾಲೆಯಲ್ಲಿ 1 ರಿಂದ 7ನೇ ತರಗಯಲ್ಲಿ ಒಟ್ಟು 55 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು ಮೂವರು ಶಿಕ್ಷಕರಿದ್ದಾರೆ. ಮೂವರಲ್ಲಿ ಒಬ್ಬ ಶಿಕ್ಷಕರಿಗೆ ಅನಾರೋಗ್ಯ ಸಮಸ್ಯೆ ಇರುವ ಕಾರಣ ಸಮರ್ಪಕವಾಗಿ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಕಳೆದ 2 ತಿಂಗಳನಿಂದ ಅನಾರೋಗ್ಯದ ಕಾರಣ ಶಿಕ್ಷಕರೊಬ್ಬರು ಶಾಲೆಗೆ ಸರಿಯಾಗಿ ಬಾರದೇ ಇರುವ ಪರಿಣಾಮ ಮಕ್ಕಳಿಗೆ ತೊಂದರೆಯಾಗಿದೆ.
ಇರುವ ಇಬ್ಬರು ಶಿಕ್ಷಕರಲ್ಲಿ ಒಬ್ಬರು ಮುಖ್ಯ ಶಿಕ್ಷಕರು ಸರ್ಕಾರದ ಬಿಸಿಯೂಟ ಇತರೆ ಕಾರ್ಯಕ್ರಮಗಳಿಗೆ ಅನಿವಾರ್ಯವಾಗಿ ಹೋಗಬೇಕಾಗುತ್ತದೆ. ಇಬ್ಬರು ಶಿಕ್ಷಕರಿಂದ ಶಾಲೆಯ ಎಲ್ಲ ಮಕ್ಕಳಿಗೆ ಹೇಗೆ ಪಾಠ ಮಾಡಲು ಸಾಧ್ಯ? ಒಬ್ಬ ಕಾಯಂ ಶಿಕ್ಷಕ ಮತ್ತು ಒಬ್ಬರನ್ನು ಅತಿಥಿ ಶಿಕ್ಷಕರನ್ನಾಗಿ ನೇಮಿಸಿ ಮಕ್ಕಳಿಗೆ ಅನುಕೂಲ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.
ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಲು ಎಲ್ಲ ಪಾಲಕರು ಮುಂದಾಗಿದ್ದರು. ಇಲಾಖೆಯ ಅಧಿಕಾರಿಗಳು ಶಾಲೆಗೆ ಬೀಗ ಹಾಕಬೇಡಿ ಎಂದು ಮನವಿ ಮಾಡಿದರು. ಹೀಗಾಗಿ, ಶಾಲೆಗೆ ಬೀಗ ಹಾಕುವುದು ಬೇಡ ವಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಪಾಲಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಜು. 13ರೊಳಗೆ ಶಾಲೆಗೆ ಇಬ್ಬರು ಶಿಕ್ಷಕರನ್ನು ನೇಮಿಸಬೇಕು, ಇಲ್ಲವಾದರೆ ನಮ್ಮ ಮಕ್ಕಳ ವರ್ಗಾವಣೆ ಪತ್ರ (ಟಿಸಿ) ಕೊಡಬೇಕು. ನಾವು ಬೇರೆ ಶಾಲೆಗೆ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಮನವೊಲಿಕೆಗೆ ಬಗ್ಗದ ಪಾಲಕರು: ಸಿಆರ್‌ಪಿ ಚೇತನ ಬಣಕಾರ, ಬಿಇಒ ಶ್ರೀಧರ್ ಎನ್., ಡಿಡಿಪಿಐ ಮೋಹನ ದಂಡಿನ, ಮುಖ್ಯ ಶಿಕ್ಷಕ ವಿನಾಯಕ ಭೀಮಪ್ಪನವರ ಪಾಲಕರಿಗೆ ಅನಾರೋಗ್ಯದಿಂದ ಇರುವ ಕಾರಣ ಶಿಕ್ಷಕರು ಈಗಾಗಲೇ ವಿಆರ್‌ಎಸ್ ನೀಡಿದ್ದಾರೆ. ಶೀಘ್ರ ಶಾಲೆಗೆ ಶಿಕ್ಷಕರನ್ನು ನೇಮಿಸಲಾಗುವುದು. ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರೂ ಪಾಲಕರು ಒಪ್ಪದೆ ಮನೆಗೆ ಕರೆದುಕೊಂಡು ಹೋಗಿದ್ದಾರೆ.