ಪ್ರತಿಭಟನೆ 
ಹಾವೇರಿ

ಏಕಮುಖ‌ ಸಂಚಾರ ರದ್ದುಗೊಳಿಸಲು ಆಗ್ರಹಿಸಿ ವ್ಯಾಪಾರಸ್ಥರ ಪ್ರತಿಭಟನೆ

ಕರಿಯಪ್ಪ ಅರಳಿಕಟ್ಟಿ

ರಾಣೆಬೆನ್ನೂರು: ಏಕಮುಖ ಸಂಚಾರ ವ್ಯವಸ್ಥೆಯಿಂದ ತಮ್ಮ ವ್ಯಾಪಾರ, ವಹಿವಾಟು ಕುಂಠಿತಗೊಂಡಿದ್ದು, ಕೂಡಲೇ ಏಕಮುಖ ಸಂಚಾರ ವ್ಯವಸ್ಥೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ನಗರದ ಎಡಿಬಿ ರಸ್ತೆಯ ವರ್ತಕರು ಬುಧವಾರ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಎಡಿಬಿ (ಅಗ್ರಿಕಲ್ಚರ್ ಡೆವ್ಲೆಪ್ಮೆಂಟ್ ಬ್ಯಾಂಕ್) ರಸ್ತೆಯು ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿ ವಿವಿಧ ಬಗೆಯ ಅಂಗಡಿಗಳಿದ್ದು ನೂರಾರು ಕುಟುಂಬಗಳು ಜೀವನೋಪಾಯಕ್ಕೆ ಇದನ್ನೆ ಅವಲಂಬಿಸಿವೆ. ಇದೀಗ ಈ ರಸ್ತೆಯನ್ನು ಏಕಮುಖ ಸಂಚಾರವಾಗಿ ಮಾರ್ಪಾಟು ಮಾಡಲಾಗಿದೆ. ಇದರಿಂದ ಗ್ರಾಹಕರು ಈ ರಸ್ತೆ ಮಾರ್ಗದಲ್ಲಿ ಖರೀದಿಗೆ ಬರುತ್ತಿಲ್ಲ. ಹೀಗಾಗಿ ಎಲ್ಲ ವ್ಯಾಪಾರಿಗಳು ತೀವ್ರ ಆಥಿರ್ಕ ಸಂಕಷ್ಟ ಎದುರಿಸುವಂತಾಗಿದೆ.

ಆದ್ದರಿಂದ ಅಂಗಡಿ ಬಾಡಿಗೆ, ಸಿಬ್ಬಂದಿ ವೇತನ, ವಿದ್ಯುತ್ ಬಿಲ್ ಸೇರಿದಂತೆ ದೈನಂದಿನ ವೆಚ್ಚಗಳನ್ನು ಭರಿಸುವುದು ತುಂಬಾ ಪ್ರಯಾಸಕರವಾಗಿದೆ. ಅನೇಕ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದ್ದು ತಮ್ಮ ವ್ಯವಹಾರ ಮುನ್ನಡೆಸುವುದು ಸವಾಲಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹಲವಾರು ವರ್ತಕರು ತಮ್ಮ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚುವ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ.

ನಮ್ಮ ಉದ್ದೇಶ ಸಂಚಾರ ವ್ಯವಸ್ಥೆ ವಿರೋಧಿಸುವುದಲ್ಲ. ಸಾರ್ವಜನಿಕರ ಸುರಕ್ಷತೆ ನಮಗೂ ಮುಖ್ಯ. ಆದರೆ ಸಂಚಾರ ವ್ಯವಸ್ಥೆಯಿಂದ ವರ್ತಕರಿಗೆ ಆಗುತ್ತಿರುವ ತೊಂದರೆ ಪರಿಗಣಿಸಬೇಕು. ಜಿಲ್ಲಾಧಿಕಾರಿಯವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಬೇಕು. ಸಾರ್ವಜನಿಕರಿಗೂ ಹಾಗೂ ವರ್ತಕರಿಗೂ ಸರಿದೂಗುವಂತೆ ಏಕಮುಖ ಸಂಚಾರ ವ್ಯವಸ್ಥೆ ರದ್ದುಗೊಳಿಸಿ ದ್ವಿಮುಖ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಸಂಚಾರ ಠಾಣೆ ಪಿಎಸ್ಐ ಕೃಷ್ಣಪ್ಪ ತೋಪಿನ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಹನುಮಂತಪ್ಪ ಚಳಗೇರಿ, ಜಗದೀಶ ಪ್ರಜಾಪತ, ರಾಘವೇಂದ್ರ ರೇವಣಕರ, ಕೈಲಾಸ ಭಾಟಿ, ಜಿಕ್ರಿಯಾ ಕುಲಕಣಿರ್, ಬಸವರಾಜ ಕರೇಭರಮಣ್ಣನವರ, ಬಸವರಾಜ ಕೆ., ಜಿತೇಂದ್ರ ರಾಜಪುರೋಹಿತ, ಮಂಜುನಾಥ ಕಾಟೋಕರ, ಪರಮೇಶಪ್ಪ ಹಾವನೂರ ಮತ್ತಿತರರು ಪಾಲ್ಗೊಂಡಿದ್ದರು.