ಶಿಗ್ಗಾಂವ ತಾಲೂಕಿನ ಹಿರೇಮಲ್ಲೂರ ಗ್ರಾಮದ ಜಮೀನಿನಲ್ಲಿ ಮಳೆಯಿಲ್ಲದೆ ಒಣಗುತ್ತಿರುವ ಮೆಕ್ಕೆ ಜೋಳ. 
ಹಾವೇರಿ

rain: ಬಾರದ ಮಳೆ, ಬಸವಳಿದ ಬೆಳೆ

ಮಂಜುನಾಥ ಗದಗಿನ
ಈಶ್ವರಗೌಡ ಕರಿಗೌಡ್ರ ಶಿಗ್ಗಾಂವ
ಮುಂಗಾರು ಉತ್ತಮವಾಗಿ ಸಂತಸಗೊಂಡು ಬಿತ್ತನೆ ಕಾರ್ಯಕೈಗೊಂಡಿದ್ದ ರೈತರು ಇದೀಗ ಮಳೆ ಇಲ್ಲದೆ ಆತಂಕಗೊಂಡಿದ್ದಾರೆ. ಮೊಳಕೆಯೊಡೆದು ಬೆಳೆಯುತ್ತಿರುವ ಬೆಳೆಗಳು ಬಾಡುವ ಭೀತಿ ಅನ್ನದಾತರರನ್ನು ಆವರಿಸಿದೆ.
ಮೇ ತಿಂಗಳ ಕೊನೆ, ಜೂನ್ ಮೊದಲ ವಾರದಲ್ಲಿ ಅಲ್ಪ ಸ್ವಲ್ಪ ಮಳೆ ಬಂದು ಬಹುಪಾಲು ರೈತರು ತಮ್ಮ ಕೃಷಿ ಭೂಮಿಯಲ್ಲಿ ಭತ್ತ, ಗೋವಿನಜೋಳ, ಶೇಂಗಾ, ಸೋಯಾಬೀನ್, ಹತ್ತಿ ಸೇರಿದಂತೆ ಇನ್ನಿತರ ಬೀಜ ಬಿತ್ತಿ ಖುಷಿ ಪಟ್ಟಿದರು. ಆದರೆ, ಆ ಖುಷಿ ಬಹಳಷ್ಟು ದಿನ ಉಳಿಯುವಂತೆ ಕಾಣುತ್ತಿಲ್ಲ. ಅಷ್ಟಿಷ್ಟು ಮಳೆಗೆ ಬಿತ್ತಿದ ಬೀಜವೂ ಮೊಳಕೆಯಾಗಿ ಮೇಲೆ ಬಂದು ಮುಗಿಲು ನೋಡುತ್ತಿದೆ. ಆದರೆ, ಮಳೆ ಬರುವ ಆಶಾದಾಯಕ ವಾತಾವರಣವಿಲ್ಲದೆ ರೈತ ಚಿಂತಿತನಾಗಿದ್ದಾನೆ. ಭೂಮಿಯಲ್ಲಿ ಬೆಳೆದು ನಿಂತಿರುವ ಪೈರು ಬಿಸಿಲಿನ ತಾಪಕ್ಕೆ ಒಣಗುತ್ತಿರುವುದನ್ನು ನೋಡಲಾಗದೇ ರೈತ ತನ್ನ ಕೃಷಿ ಭೂಮಿಯತ್ತ ಮುಖವನ್ನೂ ಮಾಡಲಾಗದ ಸ್ಥಿತಿಗೆ ತಲುಪಿದ್ದಾನೆ.
39,664 ಹೆಕ್ಟೇರ್ ಬಿತ್ತನೆ: ತಾಲೂಕಿನಲ್ಲಿ ಒಟ್ಟು 39,664 ಹೆಕ್ಟೇರ್ ಕೃಷಿ ಬಿತ್ತನೆ ಭೂಮಿ ಇದೆ. ಇದರಲ್ಲಿ ಈಗಾಗಲೇ 4931 ಹೆಕ್ಟೇರ್ ಭತ್ತ, 18792 ಹೆಕ್ಟೇರ್ ಗೋವಿನ ಜೋಳ, 6826 ಹೆಕ್ಟೇರ್ ಸೋಯಾಬೀನ್, 828 ಹೆಕ್ಟೇರ್ ಶೇಂಗಾ, 18 ಹೆಕ್ಟೇರ್ ಹತ್ತಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಇದರಲ್ಲಿ 27,568 ಹೆಕ್ಟೇರ್ ಮಳೆ ಆಶ್ರಿತ ಭೂಮಿ, 5426 ಹೆಕ್ಟೇರ್ ನೀರಾವರಿ ಕೃಷಿ ಭೂಮಿ ಸೇರಿದಂತೆ 32,994 ಹೆಕ್ಟೇರ್ ಭೂಮಿ ಬಿತ್ತನೆ ಮಾಡಲಾಗಿದೆ. ಉಳಿದಂತೆ ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದಿ, ಅವರೆ ಮುಂತಾದ ಬೀಜಗಳನ್ನು ಬಿತ್ತಲಾಗಿದೆ.
ರೈತ ಬೀಜ ಗೊಬ್ಬರಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಹಣ ಹಾಕಿದ್ದಾನೆ. ಕೂಲಿ ಕಾರ್ಮಿಕರ ಕೊರತೆಯಿಂದ, ಯಂತ್ರಗಳ ಸಹಾಯದಿಂದ ಉತ್ತಮ ಬಿತ್ತನೆ ನಡೆದಿದ್ದರೂ ಈ ವರ್ಷದ ರೈತನ ಕೃಷಿ ಭವಿಷ್ಯ ಮಾತ್ರ ಉತ್ತಮವಿಲ್ಲ ಎಂದು ಭಾಸವಾಗುತ್ತಿದೆ. ಮುಂಗಾರಿನ ಮಳೆಯ ವಿಫಲತೆಯಿಂದ ಕೃಷಿಯ ಭರವಸೆಯನ್ನೇ ಕಳೆದುಕೊಂಡಿದ್ದಾನೆ.
ಮಳೆ ಕೊರತೆ: ಮೇ ತಿಂಗಳಿನಲ್ಲಿ ವಾಡಿಕೆ ಮಳೆ 68.8 ಮಿ.ಮಿ. ಆಗಬೇಕಿತ್ತು. ಆದರೆ, 57 ಮಿ.ಮಿ. ಮಳೆ ಬಿದ್ದಿದೆ. ಜೂನ್ ತಿಂಗಳ ವಾಡಿಕೆ ಮಳೆ 123 ಮಿ.ಮಿ. ಆದರೆ ಬಿದ್ದದ್ದು ಕೇವಲ 32 ಮಿ.ಮಿ. ಮಾತ್ರ. ಹೀಗಾಗಿ ರೈತರು ಇದೀಗ ಆಕಾಶದತ್ತ ಮುಖ ಮಾಡಿದ್ದಾರೆ.
"

ಮುಂಗಾರಿನ ಆಸೆ ಹೊತ್ತು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ-ಗೊಬ್ಬರ ಉಳಿಮೆ, ಆಳುಗಳಿಗೆ ಖರ್ಚು ಮಾಡಲಾಗಿದೆ. ಆದರೆ, ಇದೀಗ ಮಳೆ ಕೈಕೊಟ್ಟಿದ್ದರಿಂದ ಆತಂಕ ಎದುರಾಗಿದೆ. ಇನ್ನಾದರೂ ಉತ್ತಮ ಮಳೆಯಾಗಿ ನಮ್ಮ ಬಾಳು ಹಸನಾಗಲಿ.

— ಕಟ್ಟೆಪ್ಪ ಮುದ್ದಪ್ಪನವರ. ಹಿರೇಮಲ್ಲೂರ ಗ್ರಾಮದ ರೈತ
"

ತಾಲೂಕಿನಲ್ಲಿ ಶೇ. 90 ಬಿತ್ತನೆ ಕಾರ್ಯ ಮುಗಿದಿದ್ದು, ಮೊಳಕೆ ಹೊಡೆದ ಬೆಳೆಗಳಿಗೆ ಸದ್ಯ ಮಳೆಯ ಅವಶ್ಯಕತೆ ಬಹಳಷ್ಟಿದೆ. ಬಿಸಿಲಿನ ತಾಪದಿಂದ ಬೆಳೆಗಳು ಬಾಡುವ ಸ್ಥಿತಿಯಲ್ಲಿದ್ದರೂ, ಮೂರ್ನಾಲ್ಕು ದಿನಗಳಲ್ಲಿ ಮಳೆಯಾದರೆ ಚೇತರಿಸಿಕೊಳ್ಳುವ ಹಂತದಲ್ಲಿವೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ತಾಲೂಕಿನಲ್ಲಿ ಎರಡು ಅಥವಾ ಮೂರು ದಿನಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

— ಕೊಟ್ರೇಶ್ ಗೆಜ್ಲಿ. ಸಹಾಯಕ ಕೃಷಿ ನಿರ್ದೇಶಕ ಶಿಗ್ಗಾಂವ