ಗುತ್ತಲ ಪಪಂ ಕಟ್ಟಡ 10 ಲಕ್ಷ ಲೀಟರ್ ಸಾಮರ್ಥ್ಯ ನೀರಿನ ಟ್ಯಾಂಕ್ ನಿರ್ಮಾಣ, 
ಹಾವೇರಿ

ಸದ್ಯಕ್ಕಿಲ್ಲ ನಿರಂತರ ನೀರು ಪೂರೈಕೆ

ಬಸವರಾಜ ವೀರಪ್ಪ ಗರಗ

ಪ್ರಮುಖ ಮುಖ್ಯಾಂಶಗಳು

  • 10 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್ ಕಾಮಗಾರಿ
  • ನಿಧಾನಗತಿಯಿಂದಾಗಿ ಅರ್ಧದಷ್ಟೂ ಮುಗಿದಿಲ್ಲ ಕೆಲಸ
ಗುತ್ತಲ: ಪಟ್ಟಣಕ್ಕೆ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ 40.49 ಕೋಟಿ ರೂ. ವೆಚ್ಚದಲ್ಲಿ ಒತ್ತಡಯುಕ್ತ ನೀರು ಸರಬರಾಜು (24*7) ಇದೇ ನವೆಂಬರ್‌ನಿಂದ ಕಾರ್ಯಾರಂಭ ಮಾಡಬೇಕಿತ್ತು. ಆದರೆ, ನಿಧಾನಗತಿ ಕಾರ್ಯದಿಂದಾಗಿ ನಿರಂತರ ನೀರು ಪೂರೈಕೆ ಸದ್ಯಕ್ಕಿಲ್ಲ ಎಂಬಂತಾಗಿದೆ.
ಪ್ರತಿ 15-20 ದಿನಕ್ಕೊಮ್ಮೆ ಕುಡಿಯುವ ನೀರು ಪಡೆಯುತ್ತಿರುವ ಪಟ್ಟಣದ ಜನತೆಗೆ ಈ ಯೋಜನೆ ಆರಂಭವಾದರೆ ಅಮೃತವೇ ಸಿಕ್ಕಂತೆ ಆಗುತ್ತತ್ತು. 2024ರ ಮಾರ್ಚ್ ತಿಂಗಳಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. 2025ರ ನವೆಂಬರ್ ಒಳಗೆ ಯೋಜನೆ ಕಾರ್ಯಾರಂಭ ಮಾಡಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಶೇ. 50ಕ್ಕೂ ಅಧಿಕ ಕೆಲಸವೇ ಆಗಿಲ್ಲ ಎನ್ನುತ್ತಾರೆ ಗುತ್ತಿಗೆದಾರರು.
ನಿರಂತರ ಮಳೆ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯಲ್ಲಿನ ಪೈಪ್‌ಲೈನ್ ಹಾಗೂ ರಸ್ತೆ ಮಧ್ಯದ ಕಾಮಗಾರಿಗೆ ಅನುಮತಿ ದೊರೆತಿಲ್ಲ. ನದಿಯಲ್ಲಿ ನೀರು ಹೆಚ್ಚು ಇರುವ ಕಾರಣ ಜಾಕ್‌ವೆಲ್ ನಿರ್ಮಾಣ ಕಾರ್ಯಕ್ಕೆ ತೊಂದರೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸಲು ಖಾಸಗಿ ಜಮೀನಿನಲ್ಲಿ ಸಾಗಬೇಕಾಗಿದೆ. ಮಳೆಯಿಂದಾಗಿ ಅಲ್ಲಿ ವಾಹನಗಳ ಸಂಚಾರ ದುಸ್ತರವಾಗಿದ್ದು, ಅಲ್ಲಿನ ರೈತರಿಗೂ ಇದರಿಂದ ತೊಂದರೆಗಳಿವೆ. ಉಳಿದಂತೆ ಪಟ್ಟಣದಲ್ಲಿನ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ವೇಗ ಪಡೆಯಬೇಕಿದೆ. ನಿರಂತರ ನೀರಿನ ಪೈಪ್‌ಲೈನ್ ಅಳವಡಿಸುವ ಕಾರ್ಯದಿಂದಾಗಿ ರಸ್ತೆಗಳು ಹಾಳಾಗಿದ್ದು, ಅವುಗಳ ದುರಸ್ತಿ ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ.
10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶಾಂತಿ ನಗರದ ಮೌನೇಶ್ವರ ದೇವಸ್ಥಾನದ ಬಳಿ 2.5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಆಗಬೇಕಿದೆ. ಶಿವ ನಗರದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಸಾಗಿದೆ. ಇದರೊಂದಿಗೆ ಈಗಾಗಲೇ ಇರುವ ಪಟ್ಟಣದ ಶಾಂತಿನಗರದ 2 ಹಾಗೂ ಶಿವ ನಗರದಲ್ಲಿರುವ 2 ನೀರಿನ ಟ್ಯಾಂಕ್‌ಗಳಿಂದ ಒಟ್ಟು 18 ಲಕ್ಷ ಲೀಟರ್ ನೀರು ಸಂಗ್ರಹಿಸಿ ನೀರು ಪೂರೈಸಲಾಗುತ್ತದೆ.
ಪಟ್ಟಣದಲ್ಲಿ ಪ್ರಸ್ತುತವಾಗಿ 4201 ನೀರಿನ ನಲ್ಲಿಯ ಸಂಪರ್ಕಗಳಿದ್ದು, ಯೋಜನೆಯ ಕಾರ್ಯಾರಂಭದ ಸಮಯಕ್ಕೆ 4900 ನಲ್ಲಿಯ ಸಂಪರ್ಕಗಳಿಗೆ ನೀರು ಪೂರೈಸಬೇಕಿದೆ. ಮುಂದಿನ 30 ವರ್ಷಗಳ ಅಂದರೆ 2056ನೇ ಇಸ್ವಿಯವರೆಗೆ ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗಿದೆ. ತುಂಗಭದ್ರಾ ನದಿಯ ಸೇತುವೆ ಬಳಿಯೇ ನೀರು ಸಂಗ್ರಹಿಸುವ ನಿಟ್ಟಿನಲ್ಲಿ ಬಾಂದಾರ ನಿರ್ಮಾಣವೂ ಆಗಲಿದೆ. ಇದರಿಂದ ಗುತ್ತಲ ಹಾಗೂ ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲಿದೆ ಎನ್ನುವ ಆಶಾಭಾವನೆ ಇದೆ.
ಈ ಯೋಜನೆ ಕೈಗೆತ್ತಿಕೊಂಡಿರುವ ಗುತ್ತಿಗೆದಾರರು ಯೋಜನೆ ಅನುಷ್ಠಾನದ ದಿನದಿಂದ 5 ವರ್ಷಗಳ ಕಾಲ ಈ ಯೋಜನೆಯ ನಿರ್ವಹಣೆ ಮಾಡುತ್ತಾರೆ. ಪ್ರತಿ ಮನೆಯ ನೀರು ಪೂರೈಕೆಯ ಸಂಪರ್ಕಕ್ಕೆ ಮೀಟರ್ ಅಳವಡಿಸಿ ನೀರಿನ ಬಿಲ್ ಪಡೆದುಕೊಳ್ಳುತ್ತಾರೆ. ಸುಧಾರಿತ ಮೀಟರ್ ಅಳವಡಿಕೆಯಿಂದ ನಿಖರತೆ ಬರಲಿದೆ. ಇದರಿಂದ ಅನವಶ್ಯಕ ನೀರು ಪೋಲು ತಪ್ಪಿಸಿದಂತಾಗುವುದು.

40.49 ಕೋಟಿ ರೂ. ವೆಚ್ಚದ ಕಾಮಗಾರಿ

ಅಮತ 2.0 ಯೋಜನೆಯಲ್ಲಿ ಜನರಿಗೆ ನಿರಂತರ ಹಾಗೂ ಶುದ್ಧವಾದ ಕುಡಿಯುವ ನೀರೊದಗಿಸುವ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ ಶೇ. 50ರಷ್ಟು ಪಾಲುದಾರಿಕೆಯಲ್ಲಿ 17.26 ಕೋಟಿ ರೂ. ರಾಜ್ಯ ಸರ್ಕಾರದ ಶೇ. 40 ಪಾಲುದಾರಿಕೆಯಲ್ಲಿ 13.80 ಕೋಟಿ ರೂ. ಒದಗಿಸುತ್ತಿವೆ. ಸ್ಥಳೀಯ ಪಪಂನ ಶೇ. 10ರಷ್ಟು ಪಾಲುದಾರಿಕೆಯಲ್ಲಿ 9.43 ಕೋಟಿ ಹಣ ಸೇರಿ ಒಟ್ಟ 40.49 ಕೋಟಿ ಹಣದಲ್ಲಿ ಈ ಯೋಜನೆ ಮೂಲಕ ಜನರಿಗೆ ಒತ್ತಡಯುಕ್ತ ನೀರು ಸರಬರಾಜಾಗಲಿದೆ.

ನವೆಂಬರ್‌ನಲ್ಲಿ ಯೋಜನೆ ಪೂರ್ಣಗೊಳ್ಳಬೇಕಿತ್ತು. ನಿರಂತರ ಮಳೆ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬ ಆಗಿದ್ದು ನಿಜ. ಯೋಜನೆ ಪೂರ್ಣಗೊಳ್ಳಲು ಕಾಮಗಾರಿಯ ವೇಗ ಹೆಚ್ಚಿಸಲು ಶಾಸಕರು, ಜಿಲ್ಲಾಧಿಕಾರಿಯವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಕೆಲವೇ ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಶೀಘ್ರದಲ್ಲಿಯೇ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಾಮಗಾರಿಗೆ ಅನುಮತಿ ದೊರೆಯಲಿದೆ.

ತುಂಗಭದ್ರಾ ನದಿಯ ನೀರನ್ನು ನಿರಂತರವಾಗಿ ಸಂಗ್ರಹಿಸುವ ಉದ್ದೇಶಕ್ಕೆ ಬ್ಯಾರೇಜ್ ನಿರ್ಮಿಸಲು 150 ಕೋಟಿ ರೂ. ವೆಚ್ಚದ ಯೋಜನೆ ಮಂಜೂರಿಯಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು. ಬ್ಯಾರೇಜ್ ನಿರ್ಮಾಣದಿಂದ ಬೇಸಿಗೆ ದಿನಗಳಲ್ಲಿಯೂ ನದಿಯಲ್ಲಿ ನಿರಂತರ ನೀರು ದೊರೆಯಲಿದೆ. ನಿರಂತರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದೇನೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಗುತ್ತಲ ಹಾಗೂ ಹಾವೇರಿ ಜನತೆಗೆ ನಿರಂತರವಾಗಿ ಕುಡಿಯುವ ನೀರು ದೊರೆಯಲಿದೆ.