ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಅಣಬೆ ಸಾರು ಸೇವಿಸಿ ಆಸ್ಪಸ್ಥಗೊಂಡವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. 
ಹಾವೇರಿ

ಅಣಬೆ ಸಾರು ಸೇವಿಸಿ ಒಂಬತ್ತು ಜನ ಅಸ್ವಸ್ಥ

ಬ್ಯಾಡಗಿ: ಅಣಬೆ ಸಾರು ಸೇವಿಸಿದ ಪರಿಣಾಮ ಒಂದೇ ಕುಟುಂಬದ ಒಂಬತ್ತು ಜನ ಅಸ್ವಸ್ಥಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ತಾಲೂಕಿನ ಬಿಸಲಹಳ್ಳಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಪುಟ್ಟಪ್ಪ ಬಂಗೇರ ಅವರ ಕುಟುಂಬದಲ್ಲಿ 25ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ರಾತ್ರಿ ಊಟಕ್ಕೆಂದು ಹೊಲದ ಬದುವಿನಲ್ಲಿ ಬೆಳೆದಿದ್ದ ಅಣಬೆಯನ್ನು ಬಳಸಿ ಸಾಂಬಾರು ಮಾಡಿದ್ದಾರೆ. 25 ಜನರ ಪೈಕಿ 9 ಜನ ಅಣಬೆ ಸಾರು ಇನ್ನುಳಿದವರು ಹಿರೇಕಾಯಿ ಸಾಂಬಾರು ಸೇವಿಸಿದ್ದಾರೆ. ಆದರೆ, ಅಣಬೆ ತಿಂದ 9 ಜನರಿಗೆ ಕೆಲಹೊತ್ತಿನಲ್ಲಿ ಹೊಟ್ಟೆ ನೋವು, ವಾಂತಿ-ಭೇದಿ ಶುರುವಾಗಿದೆ. ತಕ್ಷಣ ಎಲ್ಲರನ್ನೂ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲ ಆರಂಭವಾಗುತ್ತಿದಂತೆ ಹಿತ್ತಲ, ಹೊಲಗದ್ದೆಗಳಲ್ಲಿ ಬೆಳೆದ ಅಣಬೆ ತಂದು ತಿನ್ನುವ ರೂಢಿ ತಲೆಮಾರಿನಿಂದ ನಡೆದುಬಂದಿದೆ. 
"

ಅಣಬೆ ಸಾರು ಸೇವಿಸಿ ಅಸ್ವಸ್ಥರಾದ ಒಂಬತ್ತು ಜನ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಎಲ್ಲರ ರಕ್ತ ಪರೀಕ್ಷೆ ಮಾಡಿಸಿ, ಚಿಕಿತ್ಸೆ ನೀಡಿದ್ದು ಗುಣವಾಗಿದ್ದಾರೆ. ಆಹಾರದಲ್ಲಿ ಕಳೆಗೆ ಸಿಂಪಡಿಸುವ ರಾಸಾಯನಿಕ ಸೇರಿರುವ ಶಂಕೆ ವ್ಯಕ್ತವಾಗಿದೆ. ರೈತರು ಮಳೆಗಾಲದಲ್ಲಿ ಇಂತಹ ಆಹಾರ ಸೇವಿಸುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸುವುದು ಸೂಕ್ತ.

— ಡಾ.ರಾಘವೇಂದ್ರಸ್ವಾಮಿ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ