NEET Exam 
ಹಾವೇರಿ

NEET Exam ನೀಟ್ ಉತ್ತರ ಪತ್ರಿಕೆ ಬದಲಿಸಿ ಅನ್ಯಾಯ

ವಿವೇಕಾನಂದ ದಾಸನಕೊಪ್ಪ
ಹಾನಗಲ್ಲ: ನೀಟ್ (NEET Exam) ಪರೀಕ್ಷೆಯ ಅವಾಂತರಗಳು ದೇಶಾದ್ಯಂತ ಚರ್ಚೆಯಲ್ಲಿವೆ. ಇದಕ್ಕೆ ಸಾಕ್ಷಿ ಎಂಬಂತೆ ಹಾನಗಲ್ಲ ಪಟ್ಟಣದ ವಿದ್ಯಾರ್ಥಿನಿಯೊಬ್ಬಳಿಗೆ ಒಎಂಆರ್ ಬದಲಿಸಿ, ಬರೀ 11 ಅಂಕ ನೀಡಿ ಅನ್ಯಾಯ ಮಾಡಿ, ಅವಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಟ್ಟಣದ ಬಿಂದುಶ್ರೀ ಜಗದೀಶ ಪವಾರ ನೀಟ್ ಪರೀಕ್ಷೆ ಬರೆದಿದ್ದಳು. ಫಲಿತಾಂಶದಲ್ಲಿ 11 ಅಂಕ ಬಂದಿರುವುದನ್ನು ನೋಡಿ ಗಲಿಬಿಲಿಗೊಂಡ ಬಿಂದುಶ್ರೀ, ತಂದೆ-ತಾಯಿ ಸಲಹೆಯಂತೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಗೆ (ಎನ್​ಟಿಎ) ಶುಲ್ಕ ಪಾವತಿಸಿ, ವೆಬ್​ಸೈಟ್​ನಿಂದ ತನ್ನ ಒಎಂಆರ್ ಡೌನ್​ಲೋಡ್ ಮಾಡಿಕೊಂಡಿದ್ದಾಳೆ. ಆದರೆ, ಒಎಂಆರ್ ಶೀಟ್ ಬದಲಾಗಿರುವುದು ಕಂಡುಬಂದಿದೆ. ನಂತರ ನ್ಯಾಯಕ್ಕಾಗಿ ಎನ್​ಟಿಎ ಹಾಗೂ ಜಿಲಾಧಿಕಾರಿ ಕಚೇರಿ ಬಾಗಿಲು ತಟ್ಟಿದ್ದಾಳೆ.
ಒಎಂಆರ್ ಶೀಟ್​ನಲ್ಲಿ ಉತ್ತರಕ್ಕಾಗಿ ಮಾಡಿದ ಬಬಲಿಂಗ್ ನನ್ನದಲ್ಲ, ಈ ಒಎಂಆರ್ ಆಧರಿಸಿ ನನಗೆ 11 ಅಂಕ ನೀಡಲಾಗಿದೆ. ನನ್ನದಲ್ಲದ ಈ ಒಎಂಆರ್ ಶೀಟ್ ಪರೀಕ್ಷಿಸಿದಾಗಲೂ 14 ಅಂಕ ಬರುತ್ತದೆ. ನಾನು 180 ಪ್ರಶ್ನೆಗಳಿಗೆ ಉತ್ತರ ಬರೆದಿದ್ದೇನೆ. ಒಎಂಆರ್​ನಲ್ಲಿ ಕೇವಲ 41 ಪ್ರಶ್ನೆಗಳ ಉತ್ತರಕ್ಕೆ ಬಬಲಿಂಗ್ ಮಾಡಿರುವುದು ಕಾಣುತ್ತದೆ ಎಂದು ಬಿಂದುಶ್ರೀ ಹೇಳುತ್ತಾಳೆ.
ಪರೀಕ್ಷಾ ಮೇಲ್ವಿಚಾರಕರು ಒಎಂಆರ್ ನೀಡಿದ ಸಮಯ ಮಧ್ಯಾಹ್ನ 1ಗಂಟೆ 56 ನಿಮಿಷ ಹಾಗೂ ವಾಪಸ್ ತೆಗೆದುಕೊಂಡ ಸಮಯವನ್ನು1 ಗಂಟೆ 57 ನಿಮಿಷ ಎಂದು ದಾಖಲಿಸಿ ಸಹಿ ಮಾಡಿದ್ದಾರೆ. ಎರಡೂ ಸಹಿಗಳು ಭಿನ್ನವಾಗಿವೆ. ಒಎಂಆರ್​ನಲ್ಲಿ ದಾಖಲಿಸಿದ ಸಮಯ ಪರಿಗಣಿಸಿದರೆ, ವಿದ್ಯಾರ್ಥಿನಿ ಒಂದೇ ಒಂದು ನಿಮಿಷ ಪರೀಕ್ಷಾ ಕೊಠಡಿಯಲ್ಲಿದ್ದಳು ಎಂಬುದನ್ನು ತೋರಿಸುತ್ತದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ.
ಬಿಂದುಶ್ರೀ ತಂದೆ ಜಗದೀಶ ಪವಾರ ಪ್ರತಿಕ್ರಿಯಿಸಿ, ಮಗಳು ನೀಟ್​ಗಾಗಿ ಪ್ರಾಮಾಣಿಕವಾಗಿ ಓದಿದ್ದಳು. ಫಲಿತಾಂಶ ಅತ್ಯಂತ ವಿಶ್ವಾಸ ಮೂಡಿಸಿದೆ ಎಂದಿದ್ದಳು. ಫಲಿತಾಂಶ ನೋಡಿ ದಂಗಾಗಿದ್ದೇವೆ. ಮಗಳಿಗೆ ನ್ಯಾಯ ಸಿಗುವವರೆಗೆ ಹಿಂದೆ ಸರಿಯುವುದಿಲ್ಲ ಎಂದರು.
ವಿದ್ಯಾರ್ಥಿ ಸಮುದಾಯವು ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳ ವಿರುದ್ಧ ಹೋರಾಟ ಮಾಡುತ್ತಿರುವುದಕ್ಕೆ ಸರ್ಕಾರ ಸ್ಪಂದಿಸಿದಂತೆಯೇ ತನ್ನ ಅಹವಾಲಿಗೂ ನ್ಯಾಯ ಸಿಗುತ್ತದೆ ಎಂದು ನಂಬಿರುವುದಾಗಿ ಬಿಂದುಶ್ರೀ ಹೇಳುತ್ತಾಳೆ.
"

ವೈದ್ಯಳಾಗುವ ಆಸೆಯಿಂದ ಸತತ 3 ವರ್ಷ ಅತ್ಯಂತ ಶ್ರದ್ಧೆಯಿಂದ ಅಧ್ಯಯನ ಮಾಡಿದ್ದೇನೆ. ಈ ಬಾರಿ 720ಕ್ಕೆ 668 ಅಂಕ ಬರಲೇಬೇಕು. ಆದರೆ, ಕೇವಲ 11 ಅಂಕ ನೀಡಿದ್ದಾಗಿ ಫಲಿತಾಂಶ ತೋರಿಸುತ್ತಿದೆ. ಇದನ್ನು ನಂಬಲಾಗದು. ನನಗೆ ಭಾರಿ ಅನ್ಯಾಯ ಮಾಡಲಾಗಿದೆ. ನನಗೆ ನ್ಯಾಯ ಒದಗಿಸಿಕೊಡಲು ಸಂಬಂಧಿಸಿದ ಸರ್ಕಾರದ ಇಲಾಖೆಗಳು ಮುಂದಾಗಬೇಕು. ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ.

| ಬಿಂದುಶ್ರೀ ಪವಾರ, ನೊಂದ ವಿದ್ಯಾರ್ಥಿನಿ.

"

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಘಾತದ ನಂತರ ಒಎಂಆರ್ ಶೀಟ್​ಗಳನ್ನೇ ಬದಲಾಯಿಸುವ ಮೋಸದಾಟಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂಬ ಸಂಗತಿ ಬಿಂದುಶ್ರೀ ಪವಾರ ಅವರ ಫಲಿತಾಂಶದಿಂದ ಸಾಬೀತಾಗಿದೆ. ಜಾಣ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುವುದು ಅಕ್ಷಮ್ಯ ಅಪರಾಧ. 

 | ಪ್ರಶಾಂತ ಮುಚ್ಚಂಡಿ, ಸಾಮಾಜಿಕ ಕಾರ್ಯಕರ್ತ, ಹಾನಗಲ್ಲ.