ಮಂಗಳವಾರ ಶ್ರೀ ಮಹದೇಶ್ವರಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. 
ಹಾವೇರಿ

ಭೀಮನಕೊಲ್ಲಿ ಮಹದೇಶ್ವರಸ್ವಾಮಿ ಮಹಾರಥೋತ್ಸವ

ಲೋಕೇಶ್ ಮನು. ಡಿ
ಎಚ್.ಡಿ.ಕೋಟೆ: ತಾಲೂಕಿನ ಪ್ರಸಿದ್ಧ ಭೀಮನಕೊಲ್ಲಿಯಲ್ಲಿ ಮಂಗಳವಾರ ಶ್ರೀ ಮಹದೇಶ್ವರಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಅಂಗವಾಗಿ ತಾಲೂಕಿನ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಗೆ ಸಹಸ್ರ ಬಿಲ್ವಾರ್ಚನೆ, 9 ಗಂಟೆಗೆ ಮಹಾಮಂಗಳಾರತಿ ನಂತರ 10ಗಂಟೆಗೆ ರಥದ ಮೇಲಿನ ಹುಲಿವಾಹನದಲ್ಲಿ ಪುಷ್ಪಗಳಿಂದ ಅಲಂಕರಿಸಿದ್ದ ಉತ್ಸವ ಮೂರ್ತಿಯನ್ನು ಇರಿಸಲಾಯಿತು. ಬಳಿಕ ಮಂಗಳವಾದ್ಯ ಮತ್ತು ವೀರಗಾಸೆ ಕುಣಿತದೊಂದಿಗೆ ದೇವಸ್ಥಾನದ ರಥಬೀದಿಯಲ್ಲಿ ಮೆರವಣಿಗೆ ನಡೆಯಿತು. ಭಕ್ತಾದಿಗಳು ರಥೋತ್ಸವವನ್ನು ಕಣ್ತುಂಬಿಕೊಂಡು ಭಕ್ತಿ ಪರಾವಶರಾಗಿ ಉೇ ಮಾದಪ್ಪ, ಉಘೇ ಮಾದಪ್ಪ ಎಂದು ಕೂಗಿದರು.
ಬೆಳಗ್ಗೆ 6 ಗಂಟೆಗೆ ಹೋಮ, ಮಹಾರುದ್ರಾಭಿಷೇಕ, 9 ಗಂಟೆಗೆ ಮಹಾ ಮಂಗಳಾರತಿ, ರಾತ್ರಿ 12 ಗಂಟೆಗೆ ಹಾಲರವಿ ಸೇವೆ, ದೇವರ ಮೆರವಣಿಗೆ, ಕೊಂಡೊತ್ಸವ ಜರುಗಿತು.
ಜ.28 ಬೆಳಗ್ಗೆ 6ಗಂಟೆಗೆ ಸಹಸ್ರ ಬಿಲ್ವಾರ್ಚನೆ, ಇತರ ಪೂಜಾ ಕಾರ್ಯಕ್ರಮ ಹಾಗೂ ಬೆಳಗ್ಗೆ 9 ಗಂಟೆಗೆ ಮಹಾಮಂಗಳಾರತಿ, ಸಂಜೆ 6 ಗಂಟೆಗೆ ಜಾತ್ರೆಯ ಸಮಾರೋಪ ಸಮಾರಂಭ ಆಯೋಜಿಸಿದ್ದು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಅಧ್ಯಕ್ಷತೆಯನ್ನು ಶಾಸಕ ಅನಿಲ್ ಚಿಕ್ಕಮಾದು ವಹಿಸಲಿದ್ದಾರೆ. ಸಂಸದ ಸುನೀಲ್ ಬೋಸ್ ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಭಾಗವಹಿಸಲಿದ್ದಾರೆ. ರಾತ್ರಿ 12ರ ನಂತರ ಕಬಿನಿ ಹಿನ್ನೀರಿನಲ್ಲಿ ತೆಪೋತ್ಸವ ಜರುಗಲಿದೆ.
ದೇವಸ್ಥಾನವನ್ನು ಹಸಿರು ತಳಿರು- ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಬೋಟ್, ಬಸ್ ಸೌಲಭ್ಯ: ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲಕ್ಕೆ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ಹೆಚ್ಚುವರಿ ಬಸ್ ಸಂಪರ್ಕ ಎಚ್.ಡಿ.ಕೋಟೆ, ಸರಗೂರು ಮತ್ತು ಮೈಸೂರು ನಗರದಿಂದ ಕಲ್ಪಿಸಲಾಗಿದೆ. ಕ್ಷೇತ್ರದ ಕಬಿನಿ ಹಿನ್ನೀರಿನ ಮತ್ತೊಂದು ಬದಿಯಲ್ಲಿ ಇರುವ ಕಾರಾಪುರ, ಎನ್.ಬೆಳತ್ತೂರು, ಮಗ್ಗೆ, ಮಳಲಿ, ಕೆ.ಆರ್.ಪುರ ಮುಂತಾದ ಗ್ರಾಮಗಳಿಂದ ಬರುವ ಜನರಿಗೆ ಕಬಿನಿ ಹಿನ್ನೀರಿನ ಮೂಲಕ ಬರಲು ಲೋಕೋಪಯೋಗಿ ಒಳನಾಡು ಜಲಸಾರಿಗೆ ಇಲಾಖೆಯಿಂದ ದೇವಸ್ಥಾನಕ್ಕೆ ಯಾಂತ್ರೀಕೃತ ಬೋಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೋಟ್ ಸಂಚಾರ ಬೆಳಗಿನ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಇರುತ್ತದೆ.
ಜಾತ್ರಾ ಮಹೋತ್ಸವದ ಅಂಗವಾಗಿ ತೆಪ್ಪೋತ್ಸವ, ದನಗಳ ಪ್ರದರ್ಶನ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಅಂತರಸಂತೆ ಠಾಣೆಯ ಆರಕ್ಷಕ ಉಪನಿರೀಕ್ಷಕ ಚಂದ್ರಹಾಸ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಭೀಮನಕೊಲ್ಲಿ ಮಹದೇಶ್ವರಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಪಿ.ಎಸ್.ಮೂರ್ತಿ, ಉಪಾಧ್ಯಕ್ಷ ಗುರುಮಲ್ಲಪ್ಪ, ಕಾರ್ಯದರ್ಶಿ ಎಂ.ಎನ್.ಜಗದೀಶ್, ಗೌರವಾಧ್ಯಕ್ಷ ಡಿ.ಸುಂದರದಾಸ್, ಸದಸ್ಯರಾದ ಸುಬ್ಬಣ್ಣ, ಜೆ.ಪಿ.ಶಿವರಾಜು, ಮಳಲಿ ಗುರುಮೂರ್ತಿ, ದಯಾನಂದ, ಬಸವರಾಜು, ವೀರಣ್ಣ, ಬಿ.ಎಚ್.ನಂಜಪ್ಪ, ಮಲ್ಲಿಕಾರ್ಜುನ್, ಗುರುಲಿಂಗಪ್ಪ, ಬಿ.ವಿ.ಮಾದಪ್ಪ, ರಾಜಣ್ಣ ಇದ್ದರು.