ಗುತ್ತಲ: ಮನುಷ್ಯರಾಗಿ ಹುಟ್ಟುವುದಕ್ಕಿಂತ ಮನುಷ್ಯತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದು ಮುಖ್ಯ. ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಜೀವನದಲ್ಲಿ ಪಾಲಿಸಿದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮುಂಡರಗಿ ಅನ್ನದಾನೇಶ್ವರ ಮಠದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಕಲ್ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ಉದ್ಯಾನವನ್ನು ಸೋಮವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಬಸವಣ್ಣನವರ ತತ್ವಾದರ್ಶಗಳನ್ನು ಇಂದಿನ ಪೀಳಿಗೆಗೂ ಪರಿಚಯಿಸುವ ಉದ್ದೇಶದಿಂದ ಸಂಗನಬಸವ ಸ್ವಾಮೀಜಿ ಸಂಕಲ್ಪಿಸಿದ್ದ 21 ಅಡಿ ಏಕಶಿಲಾ ಬಸವಣ್ಣನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯವನ್ನು ಗುರುಸಿದ್ಧ ಸ್ವಾಮೀಜಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿರುವುದು ಮಹತ್ವದ ಸಾಧನೆ ಎಂದು ಶ್ಲಾಘಿಸಿದರು.
ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಗುತ್ತಲ ಮತ್ತು ಅಗಡಿ ಮಠಗಳಿಗೆ ರುದ್ರಮುನಿ ಶಿವಯೋಗಿಗಳೇ ಮಠಾಧೀಶರಾಗಿದ್ದರು. ಅವರು ಲಿಂಗಪೂಜಾನಿಷ್ಠರಾಗಿದ್ದು, ಆರೇಳು ಗಂಟೆಗಳ ಕಾಲ ಲಿಂಗ ಪೂಜೆಯಲ್ಲಿ ಲೀನರಾಗಿರುತ್ತಿದ್ದರು. ಅವರ ಪರಂಪರೆಯನ್ನು ಮುಂದುವರಿಸಿದ ಸಂಗನಬಸವ ಸ್ವಾಮೀಜಿಗಳು ಭಕ್ತರೊಂದಿಗೆ ಬೆರೆತು ಧಾರ್ಮಿಕ ಹಾಗೂ ಶೈಕ್ಷಣಿಕ ಕ್ರಾಂತಿಗೆ ಕಾರಣರಾಗಿದ್ದರು ಎಂದರು.
ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ತಮಿಳುನಾಡಿನಿಂದ ಬಸವಣ್ಣನವರ ಶಿಲಾಮೂರ್ತಿಯನ್ನು ಗುತ್ತಲಕ್ಕೆ ತರಲು ಸಹಕರಿಸಿದ್ದೇನೆ. ಮೂರ್ತಿ ನಿರ್ಮಾಣ ಕಾರ್ಯಕ್ಕೂ 30 ಲಕ್ಷ ರೂ.ಗಳವರೆಗೆ ನೆರವು ನೀಡಲಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮಾ. ನಾಗರಾಜ ಮಾತನಾಡಿ, ಗುತ್ತಲದ ಅಭಿವೃದ್ಧಿಗಾಗಿ ಮಠದಿಂದ ಹತ್ತಾರು ಎಕರೆ ಜಮೀನು ದಾನ ಮಾಡಿರುವುದು ಸಮಾಜದ ಬಗೆಗಿನ ಕಾಳಜಿಗೆ ಸಾಕ್ಷಿಯಾಗಿದೆ. ಸರ್ಕಾರವೂ ಮಠದ ಈ ಕೊಡುಗೆಯನ್ನು ಸ್ಮರಿಸುವ ಕೆಲಸ ಮಾಡಬೇಕು ಎಂದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಠಾಧೀಶರು ವೈದ್ಯಕೀಯ ಕಾಲೇಜ್ಗಳನ್ನು ಸ್ಥಾಪಿಸುವ ಬದಲು ಗೋಶಾಲೆಗಳ ನಿರ್ಮಾಣಕ್ಕೂ ಆದ್ಯತೆ ನೀಡಬೇಕು. ವೀರಶೈವ-ಲಿಂಗಾಯತ ಮಠಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿವೆ. ಬಸವಣ್ಣನವರ ಹೆಸರಿನಲ್ಲಿ ಸನಾತನ ಧರ್ಮ ಮತ್ತು ದೇವರುಗಳನ್ನು ಅವಹೇಳನ ಮಾಡುವವರ ನಡುವೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬಸವಣ್ಣನವರ ಭವ್ಯ ಶಿಲಾಮೂರ್ತಿ ನಿರ್ಮಿಸಿರುವ ಕಲ್ಮಠದ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.
ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತ ಮಾತನಾಡಿ, ಮುಂದಿನ ದಿನಗಳಲ್ಲಿ ಕಲ್ಮಠದಲ್ಲಿ ಆರಂಭವಾಗುವ ಗೋಶಾಲೆಗೆ 5 ಹಸುಗಳನ್ನು ನೀಡುವುದಾಗಿ ವಾಗ್ದಾನ ಮಾಡಿದರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಾವನೂರು ದಳವಾಯಿ ಮಠದ ಶಿವಕುಮಾರ ಸ್ವಾಮೀಜಿ, ಹನಮನಹಳ್ಳಿಯ ಸಿದ್ಧರಾಮ ಹಾಲ ಸ್ವಾಮೀಜಿ, ಅಂಬಿಗರ ಚೌಡಯ್ಯ ಮಠದ ಶಾಂತಭೀಷ್ಮ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಬೆಳ್ಳಟ್ಟಿಯ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ, ಸವಣೂರಿನ ದೊಡ್ಡಹುಣಸೆಕಲ್ಮಠದ ಚನ್ನಬಸವ ಸ್ವಾಮೀಜಿ, ಹತ್ತಿಮತ್ತೂರಿನ ನಿಜಗುಣ ಸ್ವಾಮೀಜಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಸಿದ್ದರಾಜ ಕಲಕೋಟಿ, ಕೋಟ್ರೇಶಪ್ಪ ಬಸೇಗಣ್ಣಿ, ಸಿ.ಬಿ ಕುರವತ್ತಿಗೌಡರ, ಪ್ರಭುಗೌಡ ಬಿಷ್ಟನಗೌಡ್ರ, ಮುತ್ತಣ್ಣ ಯಲಿಗಾರ, ಗವಿಸಿದ್ದಪ್ಪ ದ್ಯಾಮಣ್ಣನವರ, ಎಂ.ಎಂ. ಮೈದೂರ ಇತರರಿದ್ದರು.
ಪ್ರಕಾಶ ಸೊಪ್ಪಿನ, ಮಂಜುಳಾ ಕೊಪ್ಪದ, ಮಾರುತಿ ಕೋಡಬಾಳ ಹಾಗೂ ವೀರಯ್ಯ ಪ್ರಸಾದಿಮಠ ಕಾರ್ಯಕ್ರಮ ನಿರ್ವಹಿಸಿದರು.