ಗುತ್ತಲದ ಕಲ್ಮಠದದಲ್ಲಿ ಭಾನುವಾರ ಆಯೋಜಿಸಿದ್ದ ವರ್ಣರಂಜಿತ ಕಾರಂಜಿಯನ್ನು ಸಿರಿಗೆರೆ ತರಳಬಾಳು ಜಗದ್ಗುರು ಶಿವಮೂರ್ತಿ ಸ್ವಾಮೀಜಿ ಉದ್ಘಾಟಿಸಿದರು. ಗುರುಸಿದ್ಧ ಸ್ವಾಮೀಜಿ, ಪ್ರದೀಪ ಸಾಲಗೇರಿ, ಚನ್ನವೀರಯ್ಯ ಚಿಕ್ಕಮಠ, ಶಿವಬಸವ ಸ್ವಾಮೀಜಿ, ಶಿವಯೋಗಿ ಸ್ವಾಮೀಜಿ ಇತರರಿದ್ದರು.  
ಹಾವೇರಿ

ಅಂತರಂಗದ ಶುದ್ಧತೆಯಿಂದ ಕೂಡಿರಲಿ ಭಕ್ತಿ

ಗುತ್ತಲ: ಬಸವಣ್ಣನವರ ತತ್ವಾದರ್ಶಗಳು ಇಂದಿನ ಪೀಳಿಗೆಯ ಬದುಕಿಗೆ ದಾರಿದೀಪವಾಗಿವೆ. ಭಕ್ತಿಯು ನೈಜತೆ ಮತ್ತು ಅಂತರಂಗದ ಶುದ್ಧತೆಯಿಂದ ಕೂಡಿರಬೇಕು ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

21 ಅಡಿ ಎತ್ತರದ ಏಕಶಿಲಾ ಜಗಜ್ಯೋತಿ ಬಸವೇಶ್ವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಕಲ್ಮಠದ ಆವರಣದಲ್ಲಿ ಭಾನುವಾರ ವರ್ಣರಂಜಿತ ಕಾರಂಜಿ ಉದ್ಘಾಟಿಸಿ ಮಾತನಾಡಿದರು.

ವಚನ ಸಾಹಿತ್ಯವು ಬಸವಾದಿ ಶಿವಶರಣರು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಧಾರ್ಮಿಕ ಹಾಗೂ ನೈತಿಕ ಸಂಸ್ಕಾರ ನೀಡಿದಾಗ ಅವರ ಬದುಕು ಉಜ್ವಲವಾಗುತ್ತದೆ. ಸ್ಥಾವರಗಳಿಗೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂದು ಜಗತ್ತಿಗೆ ಸಾರಿದವರು ಬಸಣ್ಣನವರು ಎಂದ ಶ್ರೀಗಳು, ಗುತ್ತಲ ಕಲ್ಮಠದ ಲಿಂ. ಸಂಗನಬಸವ ಸ್ವಾಮೀಜಿಯವರ ಸತ್ಯಸಂಕಲ್ಪವನ್ನು ಪ್ರಸ್ತುತ ಪೀಠಾಧ್ಯಕ್ಷ ಶ್ರೀಗುರುಸಿದ್ಧ ಸ್ವಾಮೀಜಿ ಸಾಕಾರಗೊಳಿಸಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಬಸವಣ್ಣನವರ ಕಾಯಕತತ್ವ, ಜಾತ್ಯತೀತ ನಿಲುವು ಹಾಗೂ ಸಮಾನತೆಯ ಸಂದೇಶ ಎಲ್ಲ ನಾಯಕರಿಗೂ ಪ್ರೇರಣೆಯಾಗಲಿ. ಕಾಯಕ, ದಾಸೋಹ ಮತ್ತು ಸಮನ್ವಯದ ಮೂಲಕ ಜಗತ್ತಿಗೆ ಮಾನವೀಯತೆಯ ಸಂದೇಶ ಸಾರಿದ ಸಾಂಸ್ಕೃತಿಕ ನಾಯಕ ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಗುತ್ತಲ ಮಾತ್ರವಲ್ಲ, ಇಡೀ ಜಿಲ್ಲೆ ಹೆಮ್ಮೆಪಡುವ ಕಾರ್ಯವನ್ನು ಗುರುಸಿದ್ಧ ಸ್ವಾಮೀಜಿ ಮಾಡಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲ್ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಗುತ್ತಲ ಕಲ್ಮಠ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಬಸವಣ್ಣನವರ ತತ್ವಾದರ್ಶಗಳ ಹಾದಿಯಲ್ಲಿ ಮುನ್ನಡೆಯುತ್ತಿದೆ. ನ.17ರಂದು ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಸಂತಸದ ಸಂಗತಿ ಎಂದರು.

ಕರ್ಜಗಿಯ ಶಿವಯೋಗಿ ಶಿವಾಚಾರ್ಯರು, ಜಿಲ್ಲಾ ಕಬ್ಬುಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಶೋಕರಡ್ಡಿ ಮರ್ಚರಡ್ಡೇರ, ರಮೇಶ ಕಲಾಲ ಮಾತನಾಡಿದರು.

ನವಲಗುಂದದ ಶಾಂತವೀರ ಸ್ವಾಮೀಜಿ, ಹತ್ತಿಮತ್ತೂರಿನ ನಿಜಗುಣ ಸ್ವಾಮೀಜಿ, ಗುಡ್ಡದಆನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಹಡಗಲಿಯ ಶಾಂತಲಿಂಗ ಸ್ವಾಮೀಜಿ, ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ, ಶಿಗ್ಗಾಂವಿ ಸಂಗನಬಸವ ಸ್ವಾಮೀಜಿ, ಎಸ್‌ಎಫ್‌ಎನ್ ಗಾಜೀಗೌಡ್ರ, ಪಪಂ ಅಧ್ಯಕ್ಷೆ ದೀಪಾ ಭರಡಿ, ಉಪಾಧ್ಯಕ್ಷ ಪರಶುರಾಮ ಯಲಗಚ್ಚ, ಶಹಜಾನಸಾಬ ಅಗಡಿ, ಪ್ರದೀಪ ಸಾಲಗೇರಿ, ಸಾವಿತ್ರವ್ವ ಘಂಟಿ, ಗುಡ್ಡಪ್ಪ ಗೊರವರ, ಪರಮೇಶ ಶಿವಣ್ಣನವರ, ಗೌಡಪ್ಪಗೌಡ ಪಾಟೀಲ್, ಮಾರುತಿ ಗೊರವರ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಚನ್ನವೀರಯ್ಯ ಚಿಕ್ಕಮಠ, ಹೈಕೋಟ್ ಹಿರಿಯ ವಕೀಲ ಮಹೇಶ್ವರಯ್ಯ ಹಿರೇಮಠ, ಶ್ರೀನಿವಾಸ ತೇಲ್ಕರ, ತೇಜರಾಜ ಜಾನ್ಮನೆ, ಡಾ. ಕಠಾರಿ ನಾಯ್ಕ, ಡಾ. ಉಷಾರಾಣಿ ನಾಯ್ಕ, ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಕೆ.ಬಿ. ಬಿಕ್ಷಾವರ್ತಿಮಠ ಅವರ ಸಂಪಾದಕತ್ವದ ಲಿಂಗಪೂಜಾ ಲೋಲರು ಎಂಬ ಗ್ರಂಥ ಬಿಡುಗಡೆ ಮಾಡಲಾಯಿತು.

ಕುಮಾರಿ ಸಾನ್ವಿ ಮಾಳದಕರ ಭರತನಾಟ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪುಷ್ಪಾವತಿ ಶಲವಡಿಮಠ, ವೀರಯ್ಯ ಪ್ರಸಾದಿಮಠ, ಮಾರುತಿ ಕೋಡಬಾಳ, ಮಂಜುಳಾ ಕೊಪ್ಪದ ನಿರ್ವಹಿಸಿದರು.