ಪ್ರತಿಭಟನೆಯಲ್ಲಿ ಸಾಗಿಬಂದ ನೂರಾರು ಟ್ರ‍್ಯಾಕ್ಟರ್‌ಗಳು.
ಹಾನಗಲ್ಲ: ತಾಲೂಕಿನಲ್ಲಿ ತಲೆದೋರಿರುವ ವಿದ್ಯುತ್ ವ್ಯತ್ಯಯ, ಲೋ ವೋಲ್ಟೇಜ್ ಮತ್ತು ಸುಟ್ಟ ಟ್ರಾನ್ಸ್ಫಾರ್ಮರ್‌ಗಳ (ಟಿಸಿ) ಸಮಸ್ಯೆ ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ (Massive protest) ನಡೆಯಿತು.
ರೈತರು ನೂರಾರು ಟ್ರ‍್ಯಾಕ್ಟರ್‌ಗಳೊಂದಿಗೆ ಕುಮಾರೇಶ್ವರ ಮಠದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಹೀಗಾಗಿ, ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ಸುಮಾರು ನಾಲ್ಕು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, `ರೈತರೇನು ಅಕ್ರಮ ಕೆಲ್ಸಾ ಮಾಡಾಕ್ಕತ್ತಿಲ್ಲ. ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ನೀಡುವುದು ಸರ್ಕಾರದ ಕೆಲ್ಸ. ಆರ್‌ಆರ್ ನಂಬರಾದ್ರು ಕೊಡಿ, ಏಳೇಳು ನಂಬರ್ ಆದ್ರೂ ಕೊಡ್ರಿ. ನಮ್ಮ ಪಂಪ್‌ಸೆಟ್ಟಿಗೆ ವಿದ್ಯುತ್ ಕೊಡ್ರಿ, ಇಲ್ಲಾಂದ್ರ ಕೆಲಸ ಮಾಡಲಾಗದ ಅಧಿಕಾರಿ, ಜನಪ್ರತಿನಿಽಗಳು ಜಾಗಾ ಖಾಲಿ ಮಾಡ್ರಿ' ಎಂದು ಗುಡುಗಿದರು.
ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನಮ್ಮ ಮನವಿಗಳು ಲೆಕ್ಕಕ್ಕೆ ಬರುತ್ತಿಲ್ಲ. ನಾವು ದುರ್ಬಲರಲ್ಲ ಕಾದು ನೋಡುತ್ತಿದ್ದೇವೆ. ಈಗ ನಮ್ಮ ಸಹನೆ ಮೀರಿದೆ. ಹತ್ತು ಹಲವು ಬಾರಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಗಮನ ಸೆಳೆದರೂ ಸ್ಪಂದಿಸದ ಸರ್ಕಾರ ಹಾಗೂ ಅಧಿಕಾರಿಗಳ ನಡುವಳಿಕೆಯ ಅರ್ಥವೇನು. ಜಮೀನಿನಲ್ಲಿ ಬೆಳೆಗೆ ವಿದ್ಯುತ್ ಕೊರತೆಯಿಂದ ನೀರಿಲ್ಲದೆ ಬೆಳೆ ಒಣಗುತ್ತಿವೆ. ಒಣಗಿದ ಬೆಳೆಗೆ ಪರಿಹಾರ ಕೊಡಿ. ಕೇಂದ್ರ ಸರ್ಕಾರದ ಖಾಸಗೀಕರಣ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ಹೈರಾಣಾಗಿದ್ದೇವೆ. ಇದನ್ನು ಕಣ್ತೆರೆದು ನೋಡದ ಜನಪ್ರತಿನಿಧಿಗಳು ನಮಗೆ ಬೇಕಾಗಿಲ್ಲ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೆಳ್ಳೇರ ಮಾತನಾಡಿ, ರೈತರ ಬೇಡಿಕೆ ಈಡೇರದಿದ್ದರೆ ಬೀದಿಗೆ ಇಳಿಯುವುದು ಮಾತ್ರವಲ್ಲ ಅದಕ್ಕೆ ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಪಾಠ ಕಲಿಸುತ್ತೇವೆ. ಈಗಾಗಲೇ ಹಲವು ಪಾಠ ಕಲಿಸಿದ್ದೇವೆ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಹಾನಗಲ್ಲ ತಾಲೂಕಿನ ರೈತರ ಸಮಸ್ಯೆಗಳ ಬಗ್ಗೆ ಇಲಾಖೆಗಳು ನಿರ್ಲಕ್ಷ÷್ಯ ತೋರುತ್ತಿವೆ. ವಿದ್ಯುತ್ ಸಮಸ್ಯೆ ಬಗೆಗೆ ನಾಲ್ಕಾರು ತಿಂಗಳಿನಿAದಲೇ ಇಲಾಖೆ ಗಮನ ಸೆಳೆದಿದ್ದೇವೆ. ಮೇಲಿಂದ ಮೇಲೆ ಎಚ್ಚರಿಸುತ್ತಲೇ ಇದ್ದರೂ, ವಿದ್ಯುತ್ ಖೋತಾ, ವೋಲ್ಟೇಜ್ ಫಾಲ್ಟ್, ಟಿಸಿ ಸುಡುವುದರಿಂದಾಗಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಇಲ್ಲದ ದುಸ್ಥಿತಿ ಒದಗಿದೆ. ಇದನ್ನು ಬಗೆಹರಿಸಲು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳ ಅಸಹಾಯಕತೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಜಿಲ್ಲಾ ಅಧಿಕ್ಷಕ ನಾರಾಯಣ ಕಳ್ಳಿಮನಿ, ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಬಿ. ಹೊಸಮನಿ, ಎಇಇ ವಾಗೀಶ ಕಡತಿ, ಹಾನಗಲ್ಲ ಎಇಇ ವಿ.ಎಸ್. ಮರಿಗೌಡರ, ಕೆಪಿಟಿಸಿಎಲ್ ಅಽಕಾರಿ ವಿಜಯ ಜೋಶಿ ಅವರು ರೈತರ ತೀಕ್ಷ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಬ್ಬಿಬ್ಬಾದರು. ಇರುವ ವ್ಯವಸ್ಥೆ ಬದಲಾಯಿಸದೆ, ಹೆಚ್ಚುವರಿ ವಿದ್ಯುತ್ ಪೂರೈಕೆಗೆ ಅನುದಾನ ನೀಡಿ ವ್ಯವಸ್ಥೆಗೊಳಿಸುವುದೊಂದೇ ಉಳಿದ ಮಾರ್ಗ ಎಂಬ ಅಧಿಕಾರಿಗಳ ಉತ್ತರದಲ್ಲಿ ಅಸಹಾಯಕತೆ ಎದ್ದು ಕಾಣುತ್ತಿತ್ತು. ಎಲ್ಲದಕ್ಕೂ ಆಯಿತು ಶೀಘ್ರ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತ ಕಾಲಾವಕಾಶ ಕೇಳುತ್ತಿದ್ದರು. ಕೊನೆಗೂ ಯಾವುದೇ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸಲಿಲ್ಲ.
ವಿದ್ಯುತ್ ಕ್ಷೇತ್ರ ಖಾಸಗೀಕರಣ ನೀತಿ ಕೈಬಿಡಿ: ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳಿಸುವ ಕೇಂದ್ರದ ನೀತಿ ಕೈಬಿಡಬೇಕು, ರೈತರ ಪಂಪ್‌ಸೆಟ್‌ಗಳಿಗೆ ಯಾವುದೇ ಷರತ್ತಿಲ್ಲದೆ ನಿರಂತರ ವಿದ್ಯುತ್ ಪೂರೈಕೆ, ೩೩ ಕೆವಿ ಸ್ಟೇಶನ್‌ಗಳ ಅಪ್‌ಗ್ರೇಡ್, ಸುಟ್ಟ ಟಿಸಿಗಳನ್ನು ೨೪ ಗಂಟೆಯೊಳಗೆ ಬದಲಾಯಿಸುವುದು, ಮುಂಡಗೋಡ ತಾಲೂಕಿಗೆ ವಿದ್ಯುತ್ ಪೂರೈಕೆ ನಿಲ್ಲಿಸಿ, ಹಾನಗಲ್ಲ ರೈತರಿಗೆ ಆದ್ಯತೆ, ಲೈನ್‌ಮನ್‌ಗಳ ಕೊರತೆ ನಿವಾರಣೆ, ಅಪಾಯಕಾರಿ ವಿದ್ಯುತ್ ಮಾರ್ಗಗಳ ಸ್ಥಳಾಂತರ ಸೇರಿದಂತೆ ವಿವಿಧ ಬೇಡಿಕೆ ಮನವಿಯನ್ನು ತಹಸೀಲ್ದಾರ್ ಎಸ್. ರೇಣುಕಾ ಅವರ ಮೂಲಕ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸಲ್ಲಿಸಲಾಯಿತು.
ಕೆಡಿಪಿ ಸಭೆ ಮುಂದೂಡಿಕೆ: ಶಾಸಕರ ನೇತೃತ್ವದಲ್ಲಿ ಸೋಮವಾರ ನಡೆಯಬೇಕಿದ್ದ ಕೆಡಿಪಿ ಸಭೆಯನ್ನು ರೈತರ ಪ್ರತಿಭಟನೆಯ ತೀವ್ರತೆಯಿಂದಾಗಿ ಮುಂದೂಡಲಾಯಿತು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಎಚ್.ಎಚ್. ಮುಲ್ಲಾ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ವಾಸುದೇವ ಕಮಾಟಿ, ರುದ್ರಪ್ಪ ಹಣ್ಣಿ, ಮಹೇಶ ವಿರುಪಣ್ಣನವರ, ಸೋಮಪ್ಪ ಜಡೆಗೊಂಡರ್, ಶ್ರೀಕಾಂತ ದುಂಡಣ್ಣನವರ, ಉಮೇಶ ಮೂಡಿ, ಶ್ರೀಧರ ಮಲಗುಂದ, ಎಂ.ಎ. ಬಡಗಿ, ಶಂಕರಗೌಡ ಪಾಟೀಲ, ಮಹಲಿಂಗಪ್ಪ ಅಕ್ಕಿವಳ್ಳಿ ಹಾಗೂ ನೂರಾರು ರೈತರು ಇದ್ದರು.