ಪುರಸಭೆ ಸ್ವಚ್ಛತಾ ವಾಹನದೊಂದಿಗೆ ಬಡಾವಣೆಗೆ ತೆರಳಿ ಕಸ ವಿಂಗಡಣೆ ಜಾಗತಿ ಮೂಡಿಸಿದ ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ ಹಾಗೂ ಸಿಬ್ಬಂದಿ. 
ಹಾವೇರಿ

CLEAN: ನೈರ್ಮಲ್ಯ ಕಾಪಾಡುವುದೇ ದೊಡ್ಡ ಸವಾಲು

ಸೋಮನಾಥ ರೆಡ್ಡಿ

ಪ್ರಮುಖ ಮುಖ್ಯಾಂಶಗಳು

  • ಹಾನಗಲ್ಲ ಪುರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆ
  • ಸಕಾಲಕ್ಕೆ ವಿಲೇವಾರಿಯಾಗದ ತ್ಯಾಜ್ಯ
  • ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿ
ಗಿರೀಶ ದೇಶಪಾಂಡೆ ಹಾನಗಲ್ಲ
ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪೌರಕಾರ್ಮಿಕರ ಕೊರತೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪ್ರತಿ ವರ್ಷ ಹೊಸ ಬಡಾವಣೆಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಪೌರ ಕಾರ್ಮಿಕರ ಸಂಖ್ಯೆ ಮಾತ್ರ ಅಧಿಕಗೊಳ್ಳುತ್ತಿಲ್ಲ. ಇದರಿಂದಾಗಿ ಸಕಾಲದಲ್ಲಿ ಪಟ್ಟಣದ ನೈರ್ಮಲ್ಯ (CLEAN) ಕಾಪಾಡಲು ಹಿನ್ನಡೆಯಾಗುತ್ತಿದೆ. ಹೀಗಾಗಿ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ಮೊದಲೇ ಪೌರ ಕಾರ್ಮಿಕರ ಕೊರತೆ ಬಹುವಾಗಿ ಕಾಡುತ್ತಿದೆ. ಮನೆಯ ಕಸ ವಿಂಗಡಿಸಿ ಕೊಡಿ ಎಂದು ಪುರಸಭೆ ಅಧಿಕಾರಿಗಳು ಹಾಘೂ ಸಿಬ್ಬಂದಿ ಸಾರ್ವಜನಿಕರಿಗೆ ಎಷ್ಟೇ ಮನವಿ ಮಾಡಿದರೂ ಅದು ನಿರೀಕ್ಷಿತ ಲ ನೀಡುತ್ತಿಲ್ಲ. ಖಾಲಿ ನಿವೇಶನಗಳಂತೂ ಕಸದ ತೊಟ್ಟಿಗಳಾಗಿವೆ. ಇದೇ ಅನೈರ್ಮಲ್ಯಕ್ಕೆ ಪ್ರಮುಖ ಕಾರಣವಾಗುತ್ತಿದೆ.

ನಿರ್ವಹಣೆ ಸಮಸ್ಯೆ:

ಹಾನಗಲ್ಲ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ಮನೆಗಳಿವೆ. 35 ಸಾವಿರ ಜನಸಂಖ್ಯೆಯಿದೆ. ಇದು ತಾಲೂಕು ಆಡಳಿತ ಕೇಂದ್ರವೂ ಆಗಿದ್ದರಿಂದ ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿ, ಬ್ಯಾಂಕು ಸೇರಿದಂತೆ ವಿವಿಧ ವಾಣಿಜ್ಯ ವಹಿವಾಟಿನಿಂದ ಹೆಚ್ಚು ಜನ ಸಂದಣಿ ಇದೆ. ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ 90 ಪೌರಕಾರ್ಮಿಕ ಸಿಬ್ಬಂದಿ ಬೇಕು. ಇರುವುದು ಕೇವಲ 40 ಜನ ಮಾತ್ರ. ಅದರಲ್ಲೂ 10 ಹೊರಗುತ್ತಿಗೆ ಆಧಾರದ ಸಿಬ್ಬಂದಿ. ಎಬಿಸಿ ಎಂದು ಮೂರು ವಲಯ ಮಾಡಿಕೊಂಡು ಸಾರ್ವಜನಿಕ ದಟ್ಟಣೆ ಇರುವ, ಸರ್ಕಾರಿ ಕಚೇರಿ, ಬಸ್ ನಿಲ್ದಾಣ ಭಾಗವನ್ನು ಎ ವಲಯವಾಗಿ ನಿತ್ಯ ಸ್ವಚ್ಛತೆಗೆ ಒಳಪಡಿಸಲಾಗುತ್ತಿದೆ. ಬಿ ಹಾಗೂ ಸಿ ವಲಯವನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು ಕೂಡ ಕಷ್ಟಕರವಾಗಿದೆ. ಪೌರ ಕಾರ್ಮಿಕರು ಒಂದು ನೂರು ಕಿಮಿ ಚರಂಡಿ ಸ್ವಚ್ಛಗೊಳಿಸಬೇಕು. ಪುರಸಭೆಗೆ ಇದೊಂದು ಹರಸಾಹಸವಾಗಿದೆ.
ಮನೆ-ಮನೆಗಳ ಕಸ ತುಂಬುವ ವಾಹನಗಳು 6 ಇವೆ ಇನ್ನೂ 6 ವಾಹನಗಳ ಅಗತ್ಯವಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ಟ್ರಾೃಕ್ಟರ್, ಜೆಸಿಬಿ, ಟಿಪ್ಪರ್‌ಗಳಿವೆ. ಸಧ್ಯದಲ್ಲೇ ಇನ್ನೂ ಎರಡು ಟ್ರಾೃಕ್ಟರ್ ಬರುವ ನಿರೀಕ್ಷೆ ಇದೆ. ಪಟ್ಟಣದಲ್ಲಿ ನಿತ್ಯ 10 ಟನ್ ಕಸ ಸಂಗ್ರಹ ಮಾಡಿ ವಿಲೇವಾರಿ ಮಾಡಲಾಗುತ್ತದೆ. ಪಟ್ಟಣದಿಂದ 10 ಕಿಮಿ ದೂರದ ಕಸ ವಿಲೇವಾರಿ ಘಟಕಕ್ಕೆ ರವಾನಿಸಲಾಗುತ್ತದೆ. ಆದರೆ ಇದನ್ನೆಲ್ಲ ನಿರ್ವಹಿಸಲು ಇನ್ನಷ್ಟು ಸಿಬ್ಬಂದಿ ಬೇಕಿದೆ.

ಮುಖ್ಯಾಧಿಕಾರಿಯಿಂದ ಜಾಗತಿ:

ಪಟ್ಟಣದ ಸಾರ್ವಜನಿಕರು ಕಸವನ್ನು ಹಸಿಕಸ, ಒಣಕಸ, ಸ್ಯಾನಿಟರಿ, ಔಷಷ ಸೇರಿದಂತೆ ವಿಶೇಷ ಬಗೆಗಳ ಕಸವನ್ನು ವಿಭಜಿಸಿ ಪುರಸಭೆ ಕಸ ವಿಲೇವಾರಿ ವಾಹನಕ್ಕೆ ನೀಡಿದರೆ ಸಹಕಾರಿಯಾಗುತ್ತದೆ. ಕಸ ವಿಲೇವಾರಿ ಘಟಕದಲ್ಲಿ ಕಾಂಪೋಸ್ಟ್ ಘಟಕವೂ ಇದ್ದು, ಇದರಿಂದ ಒಂದು ವರ್ಷಕ್ಕೆ ಕನಿಷ್ಟ 20 ಸಾವಿರ ರೂ. ಆದಾಯ ಬರುತ್ತದೆ. ಪ್ರತಿ ಕ್ವಿಂಟಾಲ್ ಎರೆಹುಳು ಕಾಂಪೋಸ್ಟ್ ಗೊಬ್ಬರವನ್ನು 500 ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಇದಕ್ಕೆ ರೈತರಿಂದ ಬಹು ಬೇಡಿಕೆಯೂ ಇದೆ. ಇದರೊಂದಿಗೆ ಮದ್ಯದ ಖಾಲಿ ಬಾಟಲಿ, ಪ್ಲಾಸ್ಟಿಕ್, ರಟ್ಟು, ಕಬ್ಬಿಣದಂತಹ ವಸ್ತುಗಳ ಮಾರಾಟದಿಂದ ವರ್ಷಕ್ಕೆ ಅಂದಾಜು 2 ಲಕ್ಷ ರೂ. ಆದಾಯವಿದೆ. ಸಿಬ್ಬಂದಿ ಕೊರತೆ ಇರುವುದರಿಂದ ಕಸವನ್ನು ವಿಂಗಡಿಸಿ ಕೊಡಿ ಎಂಬುದು ಸಾರ್ವಜನಿಕರಿಗೆ ಪುರಸಭೆ ಸಿಬ್ಬಂದಿ ಮಾಡುತ್ತಿದ್ದಾರೆ. ಸ್ವತಃ ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ ಅವರು ಪುರಸಭೆ ಪೌರ ಕಾರ್ಮಿಕರೊಂದಿಗೆ ಬೆಳಗ್ಗೆ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಖಾಲಿ ನಿವೇಶನಗಳಲ್ಲಿ ಕಸ ಹಾಕಬೇಡಿ:

ಪಟ್ಟಣದಲ್ಲಿರುವ ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗುತ್ತಿವೆ. ಸಾರ್ವಜನಿಕರು ಇಲ್ಲಿಯೇ ಕಸ ಹಾಕುತ್ತಾರೆ. ಪಟ್ಟಣದ ಹೊರಭಾಗದ ಖಾಲಿ ನಿವೇಶನಗಳು ಮದ್ಯದ ಬಾಟಲಿಗಳು, ದೊಡ್ಡ ಪ್ರಮಾಣದ ಕಸದಿಂದ ತುಂಬಿರುತ್ತವೆ. ಅಲ್ಲೆಲ್ಲ ಗಿಡ-ಗಂಟಿಗಳು ಬೆಳೆದು ಹಂದಿಗಳ ತಾಣವಾಗುತ್ತಿವೆ. ಇದರಿಂದಾಗಿ ಉಂಟಾಗುವ ದುರ್ವಾಸನೆ ಅಕ್ಕಪಕ್ಕದ ಮನೆಗಳವರು ತಾಳಲಾರದ ಸ್ಥಿತಿಯಿದೆ. ಇಂತಹ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಸ್ಪಂದಿಸದಿದ್ದರೆ ದಂಡ ಹಾಗೂ ಸ್ವಚ್ಛತಾ ವೆಚ್ಚ ವಸೂಲಿ ಮಾಡಿ ಪುರಸಭೆಯಿಂದಲೇ ಸ್ವಚ್ಛಗೊಳಿಸುತ್ತೇವೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ.
ಹಾನಗಲ್ಲ ಪಟ್ಟಣದ ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ನಿರೀಕ್ಷೆಗಳು ಬಹಳಷ್ಟಿವೆ. ಆದರೆ, ಅನುದಾನದ ಲಭ್ಯತೆಯೂ ಇಲ್ಲಿ ಪ್ರಶ್ನೆಯಾಗಿದೆ. ಒಳ ಚರಂಡಿ ವ್ಯವಸ್ಥೆ ಆಗಬೇಕೆಂಬ ನಿರೀಕ್ಷೆಯಿದೆ. ಅದಕ್ಕೆ ಕೋಟ್ಯಂತರ ರೂ. ಬೇಕು. ಇನ್ನೂ ಈ ಬಗ್ಗೆ ಯಾವುದೇ ಯೋಜನೆ-ಯೋಚನೆ ನಡೆದಿಲ್ಲ.

ಪುರಸಭೆಯ ಆದಾಯದಲ್ಲಿ ನೈರ್ಮಲ್ಯೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಸ ವಿಂಗಡಿಸಿ ವಿಲೇವಾರಿಗೆ ಸಾರ್ವಜನಿಕರು ಸಹಕರಿಸಿದರೆ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಸಾಧ್ಯ. ಇದು ನಾಗರಿಕರಿಂದ ಸ್ವಯಂಪ್ರೇರಿತವಾಗಿ ಆಗಬೇಕು. ನಮ್ಮ ಸಿಬ್ಬಂದಿ ಕೂಡ ಜಾಗತಿ ಮೂಡಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ನೀಗುವ ಭರವಸೆಯಿದೆ. ಆದರೂ ಪೌರಕಾರ್ಮಿಕ ಸಿಬ್ಬಂದಿ ಸ್ವಚ್ಛತೆಗೆ ಹರ ಸಾಹಸ ಪಡುತ್ತಿದ್ದಾರೆ.

— ವೈ.ಕೆ. ಜಗದೀಶ, ಪುರಸಭೆ ಮುಖ್ಯಾಧಿಕಾರಿ