ಹಾವೇರಿ: ಪ್ರೀತಿಸಿದ ಯುವತಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಿ ವಿರುದ್ಧ ತಾಲೂಕಿನ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸೋಗಿ ಗ್ರಾಮದ ಮಂಜುನಾಥ ಮಲ್ಲಪ್ಪ ಜಂಗ್ಲಿ ಎಂಬುವನ ವಿರುದ್ಧ ದೂರು ದಾಖಲಾಗಿರುವುದು.
ಯುವತಿಯು ಬಿ.ಎಡ್. ಓದುವಾಗ ಆಕೆಯನ್ನು ಪರಿಚಯ ಮಾಡಿಕೊಂಡ ಆರೋಪಿ ಮಂಜುನಾಥ ನನ್ನನ್ನು ಪ್ರೀತಿ ಮಾಡಬೇಕು. ಇಲ್ಲವಾದರೆ ನಾನು ಜೀವಂತ ಇರುವುದಿಲ್ಲ ಎಂದು ಹೆದರಿಸಿ ಪ್ರೀತಿ ಮಾಡುವಂತೆ ಮಾಡಿದ್ದ. ನಂತರ ಯುವತಿಯು ಬಿ.ಎಡ್. ಮುಗಿಸಿ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆಗ ಆರೋಪಿಯು ನೀನು ನಾ ಹೇಳಿದಂತೆ ಕೇಳಬೇಕು. ನಿನ್ನ ಸಂಬಳದಲ್ಲಿ ಅರ್ಧ ಹಣ ನನಗೆ ಕೊಡಬೇಕು ಎಂದು ಹೆದರಿಸಿದ್ದ. ಅದರಂತೆ ಯುವತಿಯು ಫೋನ್ ಪೇ ಮೂಲಕ ಹಂತ ಹಂತವಾಗಿ 80 ಸಾವಿರ ರೂ. ಹಣ ಹಾಕಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.