ಶಿಗ್ಗಾಂವ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರೊಂದಿಗೆ ಜಾತಿ ಪ್ರಮಾಣಪತ್ರ ವಿತರಿಸುವ ಕುರಿತು ಸಾದರ ಸಮಾಜದ ಮುಖಂಡರು ತಮ್ಮ ವಿವಿಧ ಬೇಡಿಕೆ ಮಂಡಿಸಿದರು.
- ಸಾದರ ಜನಾಂಗಕ್ಕೆ 2ಎ ಜಾತಿ ಪ್ರಮಾಣ
- ತಹಸೀಲ್ದಾರ್ಗೆ ಸಾದರ ಲಿಂಗಾಯತ ಸಮಾಜದ ಮುಖಂಡರ ಆಗ್ರಹ
ಶಿಗ್ಗಾಂವ: ಧಾರವಾಡ ಜಿಲ್ಲೆಯ ಕುಂದಗೋಳ, ಗುಡಿಗೇರಿ, ಹುಬ್ಬಳ್ಳಿ&ಧಾರವಾಡ ಭಾಗದಲ್ಲಿ ಸಾದರ ಜನಾಂಗಕ್ಕೆ 2ಎ ಜಾತಿ ಪ್ರಮಾಣ ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿಯೂ ವಿತರಿಸಬೇಕು ಎಂದು ಸಾದರ ಲಿಂಗಾಯತ ಸಮಾಜದ ಮುಖಂಡರು ಶಿಗ್ಗಾಂವ ತಹಸೀಲ್ದಾರ್ ಅವರನ್ನು ಆಗ್ರಹಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ಹಿಂದೂ ಸಾದರ ಸಮಾಜ ಸಂಟನೆ ರಾಜ್ಯ ಪದಾಧಿಕಾರಿಗಳಾದ ಎಂ.ಎಸ್. ಪಾಟೀಲ, ಸಾದರ ಸಮಾಜಕ್ಕೆ 2ಎ ಜಾತಿ ಪ್ರಮಾಣ ವಿಷಯದಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಈ ಹಿಂದೆ ಶಿಗ್ಗಾಂವ ತಾಲೂಕಿನಲ್ಲಿಯೂ ನೀಡಿದ್ದಾರೆ ಎಂದು ದಾಖಲೆಗಳನ್ನು ತಹಸೀಲ್ದಾರ್ ಮುಂದೆ ಪ್ರದಶಿರ್ಸಿದರು.
ದಾಖಲಾತಿಗಳಿದ್ದರೂ ವಿಳಂಬ ನೀತಿಯಿಂದ ಸಮಾಜದ ಜನರಿಗೆ ಅನ್ಯಾಯವಾಗುತ್ತಿದೆ ಮತ್ತು ಓದುವ ಮಕ್ಕಳಿಗೆ ಬಹಳ ತೊಂದರೆಯಾಗಿದೆ.
ರಾಜ್ಯ ಸರ್ಕಾರದ ಗೆಜೆಟ್ ನೋಟಿಫಿಕೇಶನ್ನಲ್ಲಿ ಕ್ರಮ ಸಂಖ್ಯೆ 89ರ ಪ್ರಕಾರ ಹಿಂದೂ ಸಾದರ ಜನರಿಗೆ ಪ್ರಮಾಣಪತ್ರ ಪಡೆಯಲು ಹಕ್ಕು ಇದೆ. ಈ ವಿಷಯದಲ್ಲಿ ವಿಳಂಬ ಮಾಡಬಾರದು. ಪದೇಪದೆ ವಿಳಂಬ ಮಾಡಿದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಗೊಬ್ಬರಕ್ಕಾಗಿ ಹಾವೇರಿಯಲ್ಲಿ ನಡೆದ ಗೋಲಿಬಾರ್ ಟನೆಯಂತೆ ಜಾತಿ ಪ್ರಮಾಣಪತ್ರಕ್ಕೂ ನಡೆಯಬಾರದು ಎಂದು ಎಚ್ಚರಿಸಿದ್ದರು.
ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ನಿಮ್ಮ ಬೇಡಿಕೆಯನ್ನು ಲಿಖಿತವಾಗಿ ಎಲ್ಲಿಯೂ ತಿರಸರಿಸಿಲ್ಲ. ಆದರೆ, ನಮಗೂ ಕೂಡ ಜವಾಬ್ದಾರಿ ಇದೆ. ಶಾಲೆ ದಾಖಲಾತಿಗಳಲ್ಲಿ ಲಿಂಗಾಯತ ಅಂತ ಇದ್ದರೂ ಸ್ಥಾನಿಕ ಪರಿಶೀಲನೆ ಮಾಡಿ ಕೊಡಲು ಆರು ತಿಂಗಳ ಅವಕಾಶ ಬೇಕಾಗುತ್ತದೆ. ಆದರೆ, ನೀವು ಸುಮಾರು ಬಾರಿ ಇಲಾಖೆಗೆ ಬಂದು ಚರ್ಚೆ ಮಾಡಿರುವುದರಿಂದ 2025ರ ಜೂನ್ 25ರಂದು ನಿಮಗೆ ವರದಿ ನೀಡುತ್ತೇನೆ. ನೀವು ಸಲ್ಲಿಸಿದ ಮನವಿ ಹಾಗೂ ನಿಮ್ಮ ಸಮುದಾಯದ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ ಎಂದರು.
ತಾಲೂಕು ಕಾರ್ಯಾಧ್ಯಕ್ಷ ಪರಮಗೌಡ ತೆಂಬದಮನಿ ಮಾತನಾಡಿ, ವಿಜಯ ಗಡಣ್ಣನವರ ಎಂಬುವವರು ಅಜಿರ್ ಸಲ್ಲಿಸಿ ಆರು ತಿಂಗಳ ಕಳೆದಿದೆ. ಸ್ಥಳಿಯ ಸ್ಥಾನಿಕ ಚೌಕಾಸಿಯಲ್ಲಿ ಸಾದರ ಅಂತ ಪಂಚನಾಮ ವರದಿ ಕೊಟ್ಟಿದ್ದಾರೆ. ಆದರೂ ಏಕೆ ವಿಳಂಬ ಎಂದು ವಾದ ಮಂಡಿಸಿದರು. ಪ್ರಮಾಣಪತ್ರ ನೀಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಮಾಜದ ಮುಖಂಡರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು.