ಹಾನಗಲ್ಲಿನಲ್ಲಿ ಶ್ರೀ ಗಂಗಾ ಪರಮೇಶ್ವರಿ ಸಮುದಾಯ ಭವನವನ್ನು ಮಾಜಿ ಸಚಿವ ಪ್ರಮೋದ ಮಧ್ವರಾಜ ಉದ್ಘಾಟಿಸಿದರು. ಎನ್. ರವಿಕುಮಾರ, ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಅನಂತವಿಕಾಸ ನಿಂಗೋಜಿ, ಪ್ರದೀಪ ಶೇಷಗಿರಿ, ಭಾಸ್ಕರ ಹುಲಮನಿ, ಬಿ.ವೈ. ಬಂಡಿವಡ್ಡರ ಇತರರಿದ್ದರು.
- ವಿಪ ಮುಖ್ಯ ಸಚೇತಕ ಎನ್. ರವಿಕುಮಾರ ಆಶಯ
- ಗಂಗಾ ಪರಮೇಶ್ವರಿ ಸಮುದಾಯ ಭವನ ಉದ್ಘಾಟನೆ
ಹಾನಗಲ್ಲ: ಮಠಾಧೀಶರು ಸಮಾಜಕ್ಕೆsociety ಸರಿಯಾದ ದಿಕ್ಕು ತೋರುವ ಸಂಕಲ್ಪ ಮಾಡಬೇಕು. ಇಂದಿನ ಮಕ್ಕಳಿಗೆ ಸರಿಯಾದ ಸಂಸ್ಕಾರ, ವಿದ್ಯೆ ನೀಡುವುದು ತೀರಾ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗಂಗಾಮತ ಸಮುದಾಯದ ಶ್ರೀ ಗಂಗಾ ಪರಮೇಶ್ವರಿ ಸಮುದಾಯ ಭವನ ಲೋಕಾರ್ಪಣೆ ಸಮಾರಂಭದಲ್ಲಿ ಸಭಾ ಮಂಟಪ ಉದ್ಘಾಟಿಸಿ ಅವರು ಮಾತನಾಡಿದರು.
ಮಠಗಳಿಂದ ಆಯಾ ಸಮಾಜದ ಅಭಿವೃದ್ಧಿಯಾಗಬೇಕಲ್ಲದೆ, ಸಮಾಜದ ಅಭಿವೃದ್ಧಿಯಲ್ಲಿ ಇಡೀ ದೇಶದ ಹಿತ ಅಡಗಿದೆ ಎಂದ ಅವರು, ಮಕ್ಕಳೇ ನಮ್ಮ ಸಮಾಜದ ನಿಜವಾದ ಆಸ್ತಿ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ನಿರಾಳವಾಗಿರಬೇಡಿ. ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಕಾರ್ಯಾಧ್ಯಕ್ಷ ಪ್ರಮೋದ ಮಧ್ವರಾಜ ಮಾತನಾಡಿ, ನಮ್ಮ ಮನಸು ತಾಯ್ತನದ ಭಾವನೆಗಳನ್ನು ಹೊಂದಿರಬೇಕು. ಸಮಾಜಮುಖಿ ಚಿಂತನೆ ಮಾಡಬೇಕು, ಸಮಾಜಕ್ಕೆ ಶಕ್ತಿಯಾಗಬೇಕು. ಬಿಕ್ಕಟ್ಟು ಸೃಷ್ಟಿಸುವವರು ಬೇಡ. ಒಗ್ಗಟ್ಟು ಮೂಡಿಸುವವರು ಬೇಕು ಎಂದರು.
ಸಮುದಾಯ ಭವನದ ಭೋಜನಾಲಯ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ಸಮ ಸಮಾಜ ನಿರ್ಮಾಣದ ಪರಿಕಲ್ಪನೆ ಕಂಡಿದ್ದ ಅಂಬಿಗರ ಚೌಡಯ್ಯನವರ ವಚನಗಳ ನಿಜ ಸಾರ ತಿಳಿದು ಮೇಲು, ಕೀಳು ಭಾವನೆ ಬಿಟ್ಟು ಎಲ್ಲರೂ ಒಂದಾಗಿ ಬದುಕಬೇಕಿದೆ ಎಂದರು.
ಸಮ್ಮುಖವಹಿಸಿದ್ದ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಗಂಗಾಮತ ಸಮುದಾಯ ಎಲ್ಲ ಕಾಲಕ್ಕೂ ಒಳ್ಳೆಯದನ್ನೇ ಬಯಸಿದ ಸಮುದಾಯ. ನಿಜಶರಣ ಅಂಬಿಗರ ಚೌಡಯ್ಯನವರ ಪೀಠ ಸ್ಥಾಪನೆಯಿಂದ ಈ ಸಮುದಾಯದಲ್ಲಿ ಒಳ್ಳೆಯ ಒಗ್ಗಟ್ಟು ಸಾಧಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಸುಕ್ಷೇತ್ರ ನರಸಿಪುರ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ಸಮುದಾಯ ಭವನ ನಿರ್ಮಾಣಕ್ಕೆ ಭೂದಾನ ಮಾಡಿದ ಚಂದ್ರಶೇಖರ, ಮೋಹನ, ಪ್ರಭು, ಮಾಲತಿ ಮಲಗುಂದ ಹಾಗೂ ಚಂದ್ರಕಲಾ ಶಿವಪುತ್ರಪ್ಪ ಶೇಷಗಿರಿ ಅವರನ್ನು ಸನ್ಮಾನಿಸಲಾಯಿತು. ಗಂಗಾಮತ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ನೆಲ ಜಲ ನಿರ್ವಹಣಾ ವಿಭಾಗದ ಅಧೀಕ್ಷಕ ಇಂಜಿನಿಯರ್ ಬಿ.ವೈ. ಬಂಡಿವಡ್ಡರ, ಭೋಜರಾಜ ಕರೂದಿ, ಲಕ್ಷ್ಮೀ ನಾರಾಯಣಗೌಡ ಪಾಟೀಲ, ಗಂಗಾಮತ ಸಮಾಜದ ತಾಲೂಕಾಧ್ಯಕ್ಷ ಪ್ರದೀಪ ಶೇಷಗಿರಿ, ನಗರ ಘಟಕದ ಅಧ್ಯಕ್ಷ ಭಾಸ್ಕರ ಹುಲಮನಿ, ನೌಕರರ ಘಟಕದ ಅಧ್ಯಕ್ಷ ಕಠಾರಿ ಇತರರು ಉಪಸ್ಥಿತರಿದ್ದರು. ಮಮತಾ ಹಾಗೂ ಅಶೋಕ ಆರೆಗೊಪ್ಪ ಪ್ರಾರ್ಥಿಸಿದರು. ಕಾರ್ಯದರ್ಶಿ ನಾಗರಾಜ ಬಾರ್ಕಿ ಹಾಗೂ ಬಾಲಚಂದ್ರ ಅಂಬಿಗೇರ ಕಾರ್ಯಕ್ರಮ ನಿರ್ವಹಿಸಿದರು.