ಹಿರೇಕೆರೂರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಏರ್ಪಡಿಸಿದ್ದ ೭೧ನೇ ನಾಡಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ kannada culture ಕಾರ್ಯಕ್ರಮವನ್ನು ಶಾಸಕ ಯು.ಬಿ. ಬಣಕಾರ ಉದ್ಘಾಟಿಸಿದರು.
ಹಿರೇಕೆರೂರ: ಕನ್ನಡ ನಾಡಿನ ನೆಲ, ಜಲ, ಸಾಹಿತ್ಯ, ಪರಂಪರೆ, ಕೀರ್ತಿ ಉಳಿದು ಬೆಳೆಯಲು ಕನ್ನಡ ಸಾಹಿತ್ಯ ಪರಿಷತ್ ಸದಾ ಒಂದಿಲ್ಲೊAದು ಕೊಡುಗೆ ನೀಡುತ್ತಾ ಬಂದಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಕಸಾಪ ವತಿಯಿಂದ ಸೋಮವಾರ ಏರ್ಪಡಿಸಿದ್ದ ೭೧ನೇ ನಾಡಹಬ್ಬ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಸಂಸ್ಕೃತಿ, ಸಾಹಿತ್ಯ ಅನಾವರಣಗೊಳ್ಳಬೇಕು. ಕನ್ನಡ ಭಾಷೆ ಇಡೀ ದೇಶಕ್ಕೆ ಮಾರ್ಗದರ್ಶನ ಮಾಡಿದ ಕೀರ್ತಿ ಹೊಂದಿದೆ. ನಾಡಿನ ಭಾಷೆ, ನೆಲ, ಜಲ, ಗಡಿಭಾಗಗಳಿಗೆ ಏನಾದರೂ ತೊಂದರೆ, ಸಮಸ್ಯೆಯಾದಲ್ಲಿ ಅದರ ವಿರುದ್ಧ ಧ್ವನಿ ಮತ್ತು ಹೋರಾಟ ಮಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅನೇಕ ಸಂಘಟನೆಗಳು ಶ್ರಮಿಸಿವೆ. ಕನ್ನಡ ನಮ್ಮ ಉಸಿರಾಗಬೇಕು ಎಂದರು.
ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರು ಭಾಷೆ, ನೆಲ, ಜಲ, ಗಡಿ ಬಗ್ಗೆ ಗೌರವ ಭಾವನೆ ತೋರುವ ಜತೆಗೆ ಭಾಷಾಭಿಮಾನ ಮೆರೆಯಬೇಕು. ಕ್ಷೇತ್ರದಲ್ಲಿ ರೈತರಿಗೆ ಅತ್ಯಂತ ಉಪಯಕ್ತವಾದ ತುಂಗಾ ಮೇಲ್ದಂಡೆ ೨ನೇ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಗಮನಹರಿಸಬೇಕು ಎಂದರು.
ಸರ್ವಜ್ಞ ಸ್ಮಾರಕ ಸಮಿತಿ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಕನ್ನಡದ ತೇರನ್ನು ಎಳೆಯಬೇಕಾಗಿದೆ. ಭಾಷೆ ವಿಚಾರವಾಗಿ ಯಾವುದೇ ತೊಂದರೆ, ಸಮಸ್ಯೆ ಎದುರಾದಲ್ಲಿ ಪಕ್ಷಭೇದ ಮರೆತು ನಾವೆಲ್ಲ ಒಂದಾಗಿ ಅದರ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ತಾಲೂಕಿನ ಬುರುಡಿಕಟ್ಟಿ ಗ್ರಾಪಂ ವ್ಯಾಪ್ತಿಗೆ ಬರುವ ಪಟ್ಟಣದ ಚಿನ್ನಮುಳಗುಂದ ಪ್ಲಾಟ್‌ನಲ್ಲಿರುವ ೪ ಗುಂಟೆ ಜಾಗವನ್ನು ಕಸಾಪ ಕಚೇರಿ ಸ್ಥಾಪಿಸಲು ಮಂಜೂರು ಮಾಡಿಸಿ, ಕಟ್ಟಡ ನಿರ್ಮಿಸಲು ಸಹಾಯ ಮಾಡಬೇಕು ಎಂದರು.
ವಿಧಾನಸಭೆ ಹಕ್ಕು ಬಾಧ್ಯತೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಯು.ಬಿ. ಬಣಕಾರ ಅವರನ್ನು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರನ್ನು ತಾಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣ ಹಾಗೂ ವಿವಿಧ ಗ್ರಾಮಗಳ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾವೇರಿಯ ಸ್ನೇಹ ಮೇಲೂಡಿಯ ಮಂಜುನಾಥ ವಾಲ್ಮೀಕಿ ಮತ್ತು ಸಂಗಡಿಗರಿAದ ಕನ್ನಡ ರಸಮಂಜರಿ ಕಾರ್ಯಕ್ರಮ ನಡೆದವು.
ತಾಲೂಕು ಕಸಾಪ ಅಧ್ಯಕ್ಷ ಎನ್. ಸುರೇಶಕುಮಾರ, ಕಸಾಪ ಕೋಶಾಧ್ಯಕ್ಷ ಮಹೇಂದ್ರ ಬಡಳ್ಳಿ, ತಾಲೂಕು ಗ್ಯಾರಂಟಿ ಯೊಜನೆಗಳ ಅನುಷ್ಟಾನ ಸಮೀತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಜಿಲ್ಲಾ ಕರವೇ ಅಧ್ಯಕ್ಷ ಗಿರೀಶ ಬಾರ್ಕಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೇಘರಾಜ ಮಾಳಗಿಮನಿ, ಪ್ರಾಚಾರ್ಯ ಡಾ.ಎಸ್.ಪಿ. ಗೌಡರ, ಎಂ.ಬಿ. ಕಾಗಿನೆಲ್ಲಿ ಇದ್ದರು.