ಬ್ಯಾಡಗಿ ಕಸಾಪ ಕಾರ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ 112ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಸಾಹಿತಿ ಮಾಲತೇಶ ಚಳಗೇರಿ ಮಾತನಾಡಿದರು. ಬಿ.ಎಂ. ಜಗಾಪುರ, ಮಾಲತೇಶ ಅರಳೀಮಟ್ಟಿ, ಆನಂದ ಮುದುಕಮ್ಮನವರ ಇತರರಿದ್ದರು. 
ಹಾವೇರಿ

ಕನ್ನಡ ನಾಡಿನ ಶ್ರೇಷ್ಠತೆ ಹೆಚ್ಚಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ

ಮಂಜುನಾಥ ಗದಗಿನ
ವಿಜಯವಾಣಿ ಸುದ್ದಿಜಾಲ ಬ್ಯಾಡಗಿ
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಶತಮಾನಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸದಿದ್ದಲ್ಲಿ ಕನ್ನಡ ಭಾಷೆ, ಬೆಳವಣಿಗೆ ಸಾಕಷ್ಟು ಹಿನ್ನೆಡೆಯಾಗುತ್ತಿತ್ತು. ಅವರ ಪರಿಶ್ರಮದ ಫಲದಿಂದ ನಾಡುನುಡಿ ಶ್ರೇಷ್ಠತೆ ಹೆಚ್ಚಿಸಿದೆ ಎಂದು ಸಾಹಿತಿ ಮಾಲತೇಶ ಚಳಗೇರಿ ತಿಳಿಸಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ ಕನ್ನಡಾಭಿಮಾನ ಹಾಗೂ ಮಾತೃಭಾಷೆಯ ಪ್ರೇಮ, ಅಭಿಮಾನಕ್ಕೆ ನಾವೆಲ್ಲರೂ ಋಣಿಯಾಗಿದ್ದೇವೆ. ಅವರೊಂದಿಗೆ ಅಂದಿನ ಅವರ ಆಸ್ಥಾನದಲ್ಲಿ ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರನ್ನು ನಾವು ಸ್ಮರಿಸಬೇಕಿದೆ. 1915 ಕರ್ನಾಟಕ ಸಾಹಿತ್ಯ ಪರಿಷತ್, 1938 ಮರುನಾಮಕರಣಗೊಂಡ ಬಳಿಕ ಕನ್ನಡ ಸಾಹಿತ್ಯ ಪರಿಷತ್ ಆಯಿತು. ರಾಜ್ಯದಲ್ಲಿ ಎಲ್ಲೆಡೆ ಹಂಚಿಹೋಗಿದ್ದ ಪ್ರಾಂತ್ಯಗಳನ್ನು ಒಂದುಗೂಡಿಸಲು ಈ ಪರಿಷತ್ ನಾಂದಿ ಹಾಡಿತು. ಈ ಎಲ್ಲ ಪ್ರಯತ್ನದ ಫಲವಾಗಿ ಕರ್ನಾಟಕ ಏಕೀಕರಣ ಪ್ರಾರಂಭವಾಗಿ 1956ರಲ್ಲಿ ಮೈಸೂರು ರಾಜ್ಯ ಉದಯವಾಗುವ ಮೂಲಕ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಇನ್ನಷ್ಟ ಶಕ್ತಿ ಬಂದಂತಾಗಿಯಿತು ಎಂದರು.
ಜಾಗತೀಕರಣ ಹಾಗೂ ರಾಷ್ಟ್ರೀಕರಣದಿಂದ ಆಂಗ್ಲ ಭಾಷೆ ಕಲಿಕೆ, ಬಳಕೆ ಹೆಚ್ಚಾಗಿದಿದ್ದರೂ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಪ್ರತಿಯೊಬ್ಬರಿಗೂ ಮಾತೃಭಾಷೆ ಮೂಲ ಸಂಸ್ಕಾರ ಹಾಗೂ ಜೀವನವನ್ನು ರೂಪಿಸಿದೆ. ಸಂಬಂಧ, ಪ್ರೀತಿ, ನಂಬಿಕೆ ಹಾಗೂ ವಿಶ್ವಾಸಗಳನ್ನು ಸೃಷ್ಟಿಸಿದೆ. ನಾವು, ನಮ್ಮದು ಎನ್ನುವ ಅಭಿಮಾನ ಮೂಡಿಸಿದೆ. ಭಾಷಾಭಿಮಾನ ಬೆಳೆಸಿಕೊಂಡರೆ, ನಮ್ಮ ನೆಲಜಲ ಹಾಗೂ ನಾಡನ್ನು ಪ್ರೀತಿಸಿದಂತೆ ಎಂದು ಹೇಳಿದರು.
ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ಮಾತನಾಡಿ, ಕನ್ನಡ ಭಾಷೆ ಜ್ಞಾನಪೀಠದ ಕಿರೀಟ ಹಂಚಿಕೊಂಡಿದ್ದು, ವಿಶ್ವದಲ್ಲಿ ಅತ್ಯಂತ ವೈಶಿಷ್ಟತೆ ಪಡೆದಿದ್ದು, ಇಲ್ಲಿನ ಪ್ರಸಿದ್ಧ ಕಲೆ, ಸಾಂಸ್ಕೃತಿಕ ವೈಭವ, ದೇಶೀಯ ಸಂಸ್ಕೃತಿ, ಸಾಹಿತ್ಯ ಎಲ್ಲವೂ ಕನ್ನಡ ಭಾಷೆಯ ಮೂಲವಾಗಿದೆ. ವಿಶೇಶಿಗರು ರಾಜ್ಯಕ್ಕೆ ಭೇಟಿ ಕೊಟ್ಟಾಗ ಇಲ್ಲಿನ ವೈಶಿಷ್ಟತೆ ಕೊಂಡಾಡುವಾಗ ಕನ್ನಡದ ಗೌರವ ಹೆಚ್ಚಲಿದೆ. ಹೊಸ ಪೀಳಿಗೆಗೆ ಕನ್ನಡ ಸಾಹಿತ್ಯ, ಬರಹಗಳ ಕುರಿತು ದೊಡ್ಡಮಟ್ಟದ ಚಿಂತನೆಯಾಗಬೇಕಿದೆ. ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಲು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಶತಮಾನದ ದಾಟಿದ ಕಸಾಪ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮಗಳು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ನಡೆಸಲು ಸರ್ಕಾರದ ಆರ್ಥಿಕ ನೆರವು, ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಈಗ ಕೇವಲ ಸಂಘಟನೆಯವರಿಗೆ ಸೀಮಿತ ಎನ್ನುವ ಮನೋಭಾವ ಮೂಡಿರುವುದು ಬೇಸರದ ಸಂಗತಿಯಾಗಿದ್ದು, ಯುವಪೀಳಿಗೆಯನ್ನು ನಾವು ಸಾಹಿತ್ಯದತ್ತ ಒಲವು ಮೂಡಿಸಲು ಹೊಸ ಹೊಸ ಪ್ರಯತ್ನ ನಡೆಸಬೇಕಿದೆ ಎಂದು ಹೇಳಿದರು.
ಈ ವೇಳೆ ಕಸಾಪ ಪದಾಧಿಕಾರಿಗಳಾದ ಮಾಲತೇಶ ಅರಳೀಮಟ್ಟಿ, ಆನಂದ ಮುದುಕಮ್ಮನವರ, ಜೀವರಾಜ ಛತ್ರದ, ವಿ.ಎನ್.ಮಾಳಪ್ಪನವರ, ಎಂ.ಎ.ಪಠಾಣ, ಕೃಷ್ಣ ಬಡಿಗೇರ, ಎಸ.ಬಿ.ಇಮ್ಮಡಿ ಇತರರಿದ್ದರು.