ಬ್ಯಾಡಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಶಾಸಕ ಬಸವರಾಜ ಶಿವಣ್ಣನವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಜರುಗಿತು.  
ಹಾವೇರಿ

Kanya problem ಶಾಲಾ ದಾಖಲಾತಿ ಇಳಿಕೆಗೆ ಕನ್ಯಾ ಸಮಸ್ಯೆ ಕಾರಣ ಎಂದ ಬಿಇಒ

ಬ್ಯಾಡಗಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಕನ್ಯೆ ಸಮಸ್ಯೆಯೇ (Kanya problem) ಕಾರಣ ಎಂಬ ಅಚ್ಚರಿಯ ವಿಚಾರ ಬ್ಯಾಡಗಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆಗೆ ಬಂದಿತು.
ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಇಲಾಖೆ ವಿವರ ನೀಡುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡುತ್ತ, ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 101 ಕೊಠಡಿ ಶಿಥಿಲಗೊಂಡಿವೆ. ಕಡ್ಡಾಯವಾಗಿ ಆಪ್ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಾಜರಾತಿ ದಾಖಲಿಸಲಾಗುತ್ತಿದೆ. ಕಳೆದ ವರ್ಷ 23,599 ಮಕ್ಕಳು ದಾಖಲಾಗಿದ್ದರು. ಪ್ರಸಕ್ತ ಸಾಲಿನಲ್ಲಿ 21,704 ಮಕ್ಕಳು ದಾಖಲಾಗಿವೆ. 1700 ಮಕ್ಕಳ ದಾಖಲಾತಿ ಇಳಿಕೆಯಾಗಿದ್ದು, ಈ ಪೈಕಿ 1ನೇ ತರಗತಿಗೆ 650 ಮಕ್ಕಳ ಕೊರತೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕನ್ಯೆ ಸಮಸ್ಯೆಯಿಂದಾಗಿ ಬಹುತೇಕ ಯುವಕರ ಮದುವೆಯಾಗಿಲ್ಲ. ಹೀಗಾಗಿ, ಮಕ್ಕಳ ದಾಖಲಾತಿ ಇಳಿಕೆಯಾಗಿದೆ ಎಂದು ತಿಳಿಸುವ ಅಚ್ಚರಿ ಮೂಡಿಸಿದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮುಂಗಾರು ಮಳೆ ಕೊರತೆಯಿಂದ ತಾಲೂಕಿನಾದ್ಯಂತ ನೀರಿನ ಸಮಸ್ಯೆ ಉಂಟಾಗಲಿದೆ. ಸಾರ್ವಜನಿಕರಿಗೆ ನೀರಿನ ಕೊರತೆ ಉದ್ಭವಿಸದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷಿಸಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಆಣೂರು, ಚಿಕ್ಕಬಾಸೂರು, ಬುಡಪನಹಳ್ಳಿ ಬಹುಗ್ರಾಮ ಕುಡಿಯವ ನೀರಿನ ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು, ಹೊಳೆಯಲ್ಲಿ ನೀರು ಹರಿಯದ ಹಿನ್ನೆಲೆಯಲ್ಲಿ ನೀರಿನ ತೊಂದರೆಯಾಗುವ ಸಂಭವವಿದೆ. ಕೊಳವೆಬಾವಿಗಳು ಬತ್ತುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಡಿಯುವ ನೀರು ವಿಭಾಗ, ಪಿಡಿಒ, ನೀರು ನಿರ್ವಹಣೆ ಸಿಬ್ಬಂದಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ ನಾಯಕ, ಶರಣಮ್ಮ ಕಾರಿ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಇಂಜಿನಿಯರ್ ಸುರೇಶ ಬೇಡರ, ಎಪಿಎಂಸಿ ಕಾರ್ಯದರ್ಶಿ ಆದರ್ಶ ಡಿ.ಬಿ., ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಇದ್ದರು.