ಹಾನಗಲ್ಲ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು (Kabaddi tournament)ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಉದ್ಘಾಟಿಸಿದರು.
ಹಾನಗಲ್ಲ: ಜಿಲ್ಲಾ ಮಟ್ಟದ ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳೊಂದಿಗೆ ರ್ಚಚಿಸಿ, ಶೀಘ್ರದಲ್ಲೇ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು (Kabaddi tournament) ಹಾನಗಲ್ಲ ಪಟ್ಟಣದಲ್ಲಿ ಆಯೋಜಿಸಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಹೇಳಿದರು.
ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಗಜಾನನ ಸ್ಪೋರ್ಟ್ಸ್ ಕ್ಲಬ್ ಶನಿವಾರ ಆಯೋಜಿಸಿದ್ದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಯುವಕರನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಸೊಗಡನ್ನು ಉಳಿಸಬಹುದಾಗಿದೆ. ದೇಶೀಯ ಕ್ರೀಡೆಗಳು ನಶಿಸಿ ಹೋಗದಂತೆ ಕಾಪಾಡುವ ಹೊಣೆ ನಮ್ಮೆಲ್ಲರದ್ದಾಗಿದೆ. ಯುವಕರು ತಮ್ಮಲ್ಲಿರುವ ಪ್ರತಿಭೆ ಅಭಿವ್ಯಕ್ತಿಸಿ, ತಮ್ಮದೇಯಾದ ವಿಶೇಷ ಛಾಪನ್ನು ಮೂಡಿಸಬೇಕು. ತಮಗಿಷ್ಟವಾದ ಕ್ರೀಡೆಯಲ್ಲಿ ಹೆಸರು ಮಾಡಲು ಸಾಧ್ಯವಿದೆ ಎಂದರು.
ಜಿಪಂ ಮಾಜಿ ಸದಸ್ಯ ರಾಘವೇಂದ್ರ ತಹಶೀಲ್ದಾರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಇಂಥ ಸ್ಪರ್ಧೆಗಳನ್ನು ಆಯೋಜಿಸುವ ಅಗತ್ಯವಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಕಾಪಾಡಲು ಕ್ರೀಡೆಗಳು ಸಹಕಾರಿಯಾಗುತ್ತವೆ. ತಮ್ಮ ಉದ್ಯೋಗ-ವ್ಯವಹಾರಗಳೊಂದಿಗೆ ಯುವ ಸಂಘಟನೆಗಳನ್ನು ಕಟ್ಟಿ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದರು.
ಅಣ್ಣಪ್ಪ ಚಾಕಾಪೂರ, ಸಂಘಟಕರಾದ ವಿಜಯಾನಂದ ಸುಬ್ಬಣ್ಣನವರ, ಕೇದಾರಪ್ಪ ಟಾಕಣ್ಣನವರ, ಶಿವಕುಮಾರ ಮಾಂಗ್ಲೇನವರ, ಜಗದೀಶ ಚನ್ನಯ್ಯನವರ, ಮಂಜುನಾಥ ಟಾಕಣ್ಣನವರ, ಮಂಜುನಾಥ ಸಾಲಿ ಇತರರಿದ್ದರು.