ರಾಣೆಬೆನ್ನೂರ: ಸತೀಶ ಜಾರಕಿಹೊಳಿಯವರು ಮುಖ್ಯಮಂತ್ರಿ ಆಗಬೇಕು. ನಿಮ್ಮ ಏಳಿಗೆ ಸಹಿಸಲಾಗದೆ ಅಸುಹೆ ಪಡುವವರು ಬಿಜೆಪಿಯಲ್ಲಿಲ್ಲ. ನಿಮ್ಮ ಕಾಂಗ್ರೆಸ್ ನಲ್ಲಿಯೇ ಇದ್ದಾರೆ ಎಂದು ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.
ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದಲ್ಲಿ ವೀರಮದಕರಿ ನಾಯಕನ ಮೂರ್ತಿ ಅನಾವರಣ ಸಮಾರಂಭದಲ್ಲಿ ಸಚಿವ ಸತೀಶ ಜಾರಕಿಹೊಳಿಯಿದ್ದ ವೇದಿಕೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಬಿಜೆಪಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ನಮ್ಮ ವಾಲ್ಮೀಕಿ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ.
ಸಮಾಜದ ಒಬ್ಬರು ಮುಖ್ಯಮಂತ್ರಿ ಆಗಲು ಇದೀಗ ಅವಕಾಶ ಬಂದಿದೆ. ಆದ್ದರಿಂದ ಸತೀಶ ಜಾರಕಿಹೊಳಿಯವರು ಮುಖ್ಯಮಂತ್ರಿ ಆಗಲೇಬೇಕು. ನೀವು ಹೆಲಿಕಾಪ್ಟರ್ ನಲ್ಲಿ ಓಡಾಡಲು ಶುರು ಮಾಡಿದ ಬಳಿಕ ಬಿಜೆಪಿಯವರಿಗಲ್ಲ, ಕಾಂಗ್ರೆಸ್ ನ ಕೆಲವರಿಗೆ ಅಸುಹೆ ಶುರುವಾಗಿದೆ. ಆದ್ದರಿಂದ ನೀವು ಸಿಎಂ ಆಗುವ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂದರು.