ಬೈಕ್ ರ್ಯಾಲಿ 
ಹಾವೇರಿ

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೈಕ್ ರ್ಯಾಲಿ

ರಾಣೆಬೆನ್ನೂರು: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಯೂಥ್ ಫಾರ್ ನೇಷನ್ ವತಿಯಿಂದ ಗುರುವಾರ ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.

ಇಲ್ಲಿಯ ಕೆಇಬಿ ಗಣೇಶ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರ್ಯಾಲಿಯು ಬಸ್ ನಿಲ್ದಾಣ, ಡಾ. ಪುನೀತ ರಾಜಕುಮಾರ ವೃತ್ತ, ಅಂಚೆ ವೃತ್ತ, ಎಡಿಬಿ ವೃತ್ತ, ಎಂ.ಜಿ. ರಸ್ತೆ, ದುರ್ಗಾ ವೃತ್ತ, ಕುರುಬಗೇರಿ ಕ್ರಾಸ್, ಕಾಕಿಗಲ್ಲಿ, ನಾಡಿಗೇರ ಓಣಿ, ಸಿದ್ದೇಶ್ವರ ನಗರ, ಮಾರುತಿ ನಗರದ ಮೂಲಕ ಮಿನಿ ವಿಧಾನಸೌಧ ಎದುರಿನ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೆಣಸಿನಹಾಳ ತಿಮ್ಮೇಗೌಡ್ರ ಪತ್ರಿಮೆ ಬಳಿ ಬಂದು ತಲುಪಿತು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ದೇಶದ ಸ್ವಾತಂತ್ರ್ಯ ತ್ಯಾಗ, ಬಲಿದಾನ ಫಲ ಈ ತಿರಂಗಾ, ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರಾಭಿಮಾನ ಸಾರುವ ಉದ್ದೇಶದಿಂದ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ಸ್ವಾತಂತ್ರ್ಯಎಂಬುದು ಅನೇಕ ಮಹನೀಯರ ಹೋರಾಟ, ತ್ಯಾಗ ಮತ್ತು ಬಲಿದಾನದ ಫಲವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಮಾಜಿ ಯೋಧ ಪ್ರಕಾಶ ಶೆಟ್ಟರ, ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ನಗರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ಗ್ರಾಮೀಣ ಘಟಕ ಅಧ್ಯಕ್ಷ ಸುಭಾಸ ಶಿರಗೇರಿ, ಚೋಳಪ್ಪ ಕಸವಾಳ, ಅಮೋಘ ಬಾದಾಮಿ, ಸಂತೋಷ ತೆವರಿ, ರಾಜು ಬಣಕಾರ, ಮೌನೇಶ ತಳವಾರ, ರಮೇಶ ಗುತ್ತಲ, ನಾಗರಾಜ ಪವಾರ, ಸಿದ್ದು ಚಿಕ್ಕಬಿದರಿ, ಮಲ್ಲಿಕಾರ್ಜುನ ಮಸಿಯಪ್ಪನವರ ಹಾಗೂ ನೂರಾರು ಯುವಕರು ಪಾಲ್ಗೊಂಡಿದ್ದರು.