ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುವುದು ಎಂದು ಡಿಎಚ್‌ಒ ಜಯಾನಂದ ಲಿಖಿತ ರೂಪದಲ್ಲಿ ಪತ್ರ ನೀಡಿದರು. ಪ್ರಮೇಳಾ ನಡುವಿನಮನಿ, ನಾರಾಯಣಪ್ಪ ಗೌರಕ್ಕನವರ, ಸಾಹಿತಿ ಡಾ.ನಿಂಗಪ್ಪ ಚಳಗೇರಿ, ನಾಗರಾಜ ಹಿರೇಮಠ ಇತರರು ಇದ್ದರು.
ರಟ್ಟಿಹಳ್ಳಿ: ತಾಲೂಕಿನ ಮಾಸೂರು ಸಮುದಾಯ ಆರೋಗ್ಯ ಕೇಂದ್ರವನ್ನು ಪಿಎಚ್‌ಸಿ ಕೆಳದರ್ಜೆಗೆ ಇಳಿಸುವ ಮತ್ತು ಸರ್ಕಾರದ ಆದೇಶದಂತೆ ವೈದ್ಯರನ್ನು ಸ್ಥಳಾಂತರಿಸುವ ಕ್ರಮ ಖಂಡಿಸಿ ಸ್ಥಳೀಯ ಗ್ರಾಪಂ ಮತ್ತು ವಿವಿಧ ಸಂಘ ಸಂಸ್ಥೆಗಳು ಸೋಮವಾರ ಮಾಸೂರು ಬಂದ್‌ಗೆ ಕರೆ ನೀಡಿದ್ದವು. ಆದರೆ, ಭಾನುವಾರ ಜಿಲ್ಲಾ ವೈದ್ಯಾಧಿಕಾರಿ ಜಯಾನಂದ ಎಂ ಗ್ರಾಪಂಗೆ ಭೇಟಿ ನೀಡಿ ಮಾಸೂರು ಸಮುದಾಯ ಆರೋಗ್ಯ ಕೇಂದ್ರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವ ಲಿಖಿತ ರೂಪದಲ್ಲಿ ಭರವಸೆ ನೀಡಿದ ಹಿನ್ನಲೆಯಲ್ಲಿ ಮಾಸೂರು ಬಂದ್ ತಾತ್ಕಾಲಿಕವಾಗಿ ಕೈಬಿಡಲಾಯಿತು.
ಈ ವೇಳೆ ಜಿಲ್ಲಾ ವೈದ್ಯಾಧಿಕಾರಿ ಜಯಾನಂದ ಎಂ ಮಾತನಾಡಿ, ಸರ್ಕಾರದ ಆದೇಶದಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಾಸರಿ ಮಾಸಿಕ 30ಕ್ಕಿಂತ ಕಡಿಮೆ ಹೆರಿಗೆ ಆಗುತ್ತಿವೆ. ಈ ಕಾರಣಕ್ಕೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಜ್ಞ ವೈದ್ಯರ ಹುದ್ದೆಗಳನ್ನು ಬೇರೆಡೆ ವರ್ಗಾಯಿಸಿ ಅಲ್ಲಿ ಎಂ.ಬಿ.ಬಿ.ಎಸ್ ವೈದ್ಯರನ್ನು ನಿಯೋಜಿಸಲು ಸರ್ಕಾರ ಆದೇಶ ನೀಡಿದೆ. ಈ ಆದೇಶ ಖಂಡಿಸಿ ಈಗಾಗಲೇ ಡಿ.6ರಂದು ಜರುಗಿದ ಪ್ರತಿಭಟನೆ ಬಗ್ಗೆ ಮತ್ತು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಪ್ರಮಾಣವನ್ನು ಹೆಚ್ಚಿಸಲು 6 ತಿಂಗಳು ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದರು.
ಶಾಸಕ ಯು.ಬಿ. ಬಣಕಾರ ಅವರು ಅಧಿವೇಶನದಲ್ಲಿ ಆರೋಗ್ಯ ಸಚಿವರ ಗಮನಕ್ಕೆ ತಂದು ಡಿ.20ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ. ಇದಕ್ಕೆ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ ಸರ್ಕಾರದ ಮಟ್ಟದಲ್ಲಿ ಇದೇ ಮಾದರಿಯಲ್ಲಿ 8-10 ಆರೋಗ್ಯ ಕೇಂದ್ರಗಳು ಸರ್ಕಾರದ ಗಮನದಲ್ಲಿದ್ದು ಈ ಬಗ್ಗೆ 15 ದಿವಸದಲ್ಲಿ ಸೂಕ್ತ ನಿರ್ದಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸದ್ಯ ಯಥಾಸ್ಥಿತಿಯಲ್ಲಿ ಮಾಸೂರು ಸಮುದಾಯ ಆರೋಗ್ಯ ಕೇಂದ್ರ ಸೇವೆ ಸಲ್ಲಿಸಲಿದೆ ಎಂದು ಹೇಳಿ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಲಿಖಿತ ರೂಪದಲ್ಲಿ ಭರವಸೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಝಡ್.ಆರ್. ಮಕಾನದಾರ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ಮಲ್ಲಿಕಾರ್ಜುನ ಬುರಡಿಕಟ್ಟಿ. ಸಾಹಿತಿ ಡಾ.ನಿಂಗಪ್ಪ ಚಳಗೇರಿ, ಗ್ರಾಪಂಉಪಾಧ್ಯಕ್ಷ ಗಿರೀಶ ಪಾಟೀಲ, ಕಾವ್ಯ ಹಿತ್ತಲಮನಿ, ನಾರಾಯಣಪ್ಪ ಗಾಯಕವಾಡ, ಸ್ಥಳೀಯರು ನಾಗರಾಜ ಹಿರೇಮಠ, ಮಧು ಹಳದಮ್ಮನವರ, ವಾಮನ ನಾಲ್ವಾಡಿ, ಮಲ್ಲೇಶಪ್ಪ ಗುತ್ತ್ಯಣ್ಣನವರ, ಸುರೇಶ ಬಡಿಗೇರ, ನಾಗನಗೌಡ ಪಾಟೀಲ ಇತರರು ಇದ್ದರು.
ಮಾಸುರು ಸಿ.ಎಚ್.ಸಿ ಕೇಂದ್ರ ಸುತ್ತಲಿನ ಅನೇಕ ಗ್ರಾಮಗಳಿಗೆ ಆಧಾರವಾಗಿದೆ. ಸಿಬ್ಬಂದಿ ಸಹಿತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶವು ಅವೈಜ್ಞಾನಿಕವಾಗಿದೆ. ಕೂಡಲೇ ಆದೇಶ ಹಿಂಪಡೆಯಬೇಕು. ಇಲ್ಲವಾದರೇ ಮಾಸೂರು ಬಂದ್ ಹಾಗೂ ಹೆದ್ದಾರಿ ಬಂದ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.