Historical drama ಹಾನಗಲ್ಲ ತಾಲೂಕಿನ ಶೇಷಗಿರಿಯಲ್ಲಿ ಪ್ರದರ್ಶನಗೊಂಡ ರಾಮ-ಕೃಷ್ಣ-ಶಿವ ಎಂಬ ನಾಟಕದ ದೃಶ್ಯ.
ಹಾನಗಲ್ಲ: ನಟ ಪ್ರಕಾಶರಾಜ್ ಸಾರಥ್ಯದ ನಿರ್ದಿಗಂತ (ಕರಾವಳಿ ಶಾಖೆ) ಆಶ್ರಯದಲ್ಲಿ ಲೋಹಿಯ ಲೇಖನ ಆಧಾರಿತ ರಾಮ-ಕೃಷ್ಣ-ಶಿವ ಎಂಬ ನಾಟಕ (Historical drama) ತಾಲೂಕಿನ ಶೇಷಗಿರಿಯ ಕಲಾ ತಂಡದ ಸಹಕಾರದೊಂದೊಂದಿಗೆ ಉದಾಸಿ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.
ಕಲಾವಿದರಾದ ಮಂಜು ಕಾಸರಗೋಡ, ಅಜೇಯಸಿಂಹ, ನಯನಸಿ, ರಾಧಾ ರಾಮಚಂದ್ರ ಹಾಗೂ ಮಾಧವ ಜೋಗಿ ಅವರುಗಳ ಮಾಂತ್ರಿಕ ಅಭಿನಯವೇ ನಾಟಕದ ಶಕ್ತಿಯಾಗಿತ್ತು. ರಾಮ, ಕೃಷ್ಣ ಹಾಗೂ ಶಿವ ಭಾರತೀಯ ಮನಸುಗಳಲ್ಲಿ ಹಾಸು ಹೊಕ್ಕಾದ ಹೆಸರುಗಳು. ಧರ್ಮ ಬುನಾದಿ ನಂಬುಗೆಯ ತಳಹದಿಯ ಮೇಲೆ ಸ್ಥಾಪಿತವಾಗಿರುವ ಶ್ರದ್ಧಾ ಪಾತ್ರಗಳು. ಇಂತಹ ಪುರಾಣ ಚರಿತ್ರೆಯನ್ನು ಪ್ರಸಿದ್ಧ ಚಿಂತಕ ಡಾ.ರಾಮಮನೋಹರ ಲೋಹಿಯಾ ಹೊಸಗಣ್ಣುಗಳಿಂದ ಬರೆದ ಇತಿಹಾಸ ಪ್ರಸಿದ್ಧ ಲೇಖನ ರಾಮ-ಕೃಷ್ಣ-ಶಿವ’ (ಕನ್ನಡಕ್ಕೆ ಕೆ.ವಿ. ಸುಬ್ಬಣ್ಣ) ಆಧಾರಿತ ನಾಟಕವಿದು. ರಾಮ ಆದರ್ಶ ಪುರುಷ, ತ್ಯಾಗಿ, ಕಾಲಾತೀತ ವ್ಯಕ್ತಿತ್ವದವ. ಕೃಷ್ಣ ಚತುರ, ಸಾಮಾನ್ಯ ಸರ್ವಶಕ್ತ. ಇನ್ನು ಶಿವ ನಿಮೋಹಿ, ಅತಿ ವಿರಳ, ಸಾಮಾನ್ಯರಲ್ಲಿ ಸಾಮಾನ್ಯ. ಇಂತಹ ವಿಶಿಷ್ಟ ಪರಿಪೂರ್ಣತೆ ವ್ಯಕ್ತಿತ್ವಗಳ ಅನಾವರಣವೇ ರಾಮ-ಕೃಷ್ಣ-ಶಿವ. ನಾಟಕದಲ್ಲಿನ ಸಂದೇಶದ ಜತೆಗೆ ಕಲಾತ್ಮಕತೆಯ ಸ್ಪರ್ಶವಿತ್ತು. ಎಲ್ಲರ್ರೂ ಒಪ್ಪಬಹುದಾದ ತಾತ್ವಿಕ ನೆಲೆ ಪ್ರೇಕ್ಷಕರ ಗಮನ ಸೆಳೆಯಿತು.
ನಿನ್ನೋಳಗಿನ ಚೈತನ್ಯವೇ ಎಲ್ಲವೂ ಆಗಿರಬೇಕು, ದೇವರನ್ನೂ ಸೃಷ್ಟಿಸಿದವರು ನಾವೇ. ನಮ್ಮ ಆಧಾರ ಕೇಂದ್ರ ಪ್ರೇರಣೆಯೇ ದೇವರು. ನಿನ್ನಲ್ಲಿ ನಿನ್ನನ್ನು ಕಾಣು ಎಂಬುದೇ ನಾಟಕದ ತಿರುಳಾಗಿತ್ತು. ಇದಕ್ಕೆ ಪೂರಕವೆಂಬಂತೆ ಹಲವು ಪ್ರಸಂಗಗಳನ್ನು ಅವರವರುಗಳ ಶಕ್ತಿ ದೌರ್ಬಲ್ಯಗಳನ್ನು ರ್ಚವಿತ ಚರಣವಾಗಿ ಲೋಹಿಯಾ ನಾಟಕದ ಎಲ್ಲ ಸನ್ನಿವೇಶಗಳಲ್ಲೂ ವಿಶ್ಲೇಷಿಸಿದ್ದಾರೆ. ಇದನ್ನು ರಂಗರೂಪಿಯಾಗಿಸಿ, ಸಂಗೀತ ನೀಡಿ ನಿರ್ದೇಶನದ ಮೂಲಕ ಗಣೇಶ ಮಂದಾಲ ರಂಗಕ್ಕೆ ತಂದಿದ್ದಾರೆ.
ಜನ ನಂಬಿದ ಸಿದ್ಧ ನಂಬುಗೆಗಳಿಗೆ ತದ್ವಿರುದ್ಧವಾಗಿ ಹೊಸ ದೃಷ್ಟಿಕೋನ ನೀಡುವ ’ರಾಮ-ಕೃಷ್ಣ-ಶಿವ’ ನಾಟಕ ಎರಡೂವರೆ ಗಂಟೆಗಳ ಕಾಲ ಸಮ್ಮೋಹಿನಿಗೊಳಿಸಿ ಹೊಸ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು. ರಾಮಾಯಣ ಮತ್ತು ಮಹಾಭಾರತ ದೇಶದ ಎರಡು ಭಾಷೆಗಳು, ಭಾರತದ ಯಾವುದೇ ಮೂಲೆಗೆ ಹೋದರೂ ಅರ್ಥವಾಗಬಲ್ಲ ಮಹಾಕಾವ್ಯಗಳು. ಕುವೆಂಪು ನೆಲೆಯಲ್ಲಿಯೂ ಪ್ರದರ್ಶನಗೊಂಡ ರಾಮ-ಕೃಷ್ಣ-ಶಿವ’ ಅದ್ಭುತ ನಾಟಕ ಎಂದು ಪ್ರದರ್ಶನದ ಕೊನೆಯಲ್ಲಿ ಹಾವೇರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದ ಮಾತು ಅಕ್ಷರಶಃ ಸತ್ಯವಾಗಿತ್ತು.