ಹಾನಗಲ್ಲಿನಲ್ಲಿ ಜರುಗಿದ ರೈತರು ವಿದ್ಯುತ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಹೆಸ್ಕಾಂ ಇಇ ಸಿ.ಬಿ. ಹೊಸಮನಿ ಮಾತನಾಡಿದರು. ಆಧಿಕಾರಿಗಳಾದ ವಿಜಯ ಜೋಶಿ, ಎಸ್.ವಿ.ಮರಿಗೌಡರ, ರುದ್ರಮುನಿ ವೇದಿಕೆಯಲ್ಲಿ ಇದ್ದರು.
ವಿಜಯವಾಣಿ ಸುದ್ದಿಜಾಲ ಹಾನಗಲ್ಲ
ನನೆಗುದಿಗೆ ಬಿದ್ದಿರುವ 3 ಗ್ರಿಡ್‌ಗಳ ಕಾಮಗಾರಿ ಶೀಘ್ರ ಆರಂಭಿಸವುದು ಹಾಗೂ ಪೂರ್ಣಪ್ರಮಾಣದ ಗುಣಮಟ್ಟದ, ಸಮಪರ್ಕ ವಿದ್ಯುತ್ ನೀಡಲು ಬದ್ಧ ಎಂಬ ವಿಶ್ವಾಸದೊಂದಿಗೆ ಹೆಸ್ಕಾಂ ಅಧಿಕಾರಿಗಳು ಹಾಗೂ ರೈತರು ರೈತ ಸಂಘದ ಸಭೆ ಭರವಸೆ ಮೂಡಿಸಿತು.
ಬುಧವಾರ ಹಾನಗಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಜರುಗಿದ ರೈತರು ಹಾಗೂ ಹೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ರೈತ ಸಂಘದ ಸಮಸ್ಯೆಗಳನ್ನು ಆಲಿಸಿದ ನಂತರ ಮಾತನಾಡಿದ ಹೆಸ್ಕಾಂ ಇಇ ಸಿ.ಬಿ. ಹೊಸಮನಿ, ಓರೆಯಾದ ಕಂಬಗಳ ದುರಸ್ತಿ, ಜೋತು ಬಿದ್ದ ತಂತಿಗಳನ್ನು ಸರಿಪಡಿಸಲು ಸ್ಥಳದಲ್ಲೇ ಸಿಬ್ಬಂದಿಗೆ ಸೂಚಿಸಿದರು. ಸೆಕ್ಷನ್ ಅಧಿಕಾರಿಗಳ ಮಾತು ಕೇಳದ ಲೈನ್‌ಮನ್ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಿದರು. ಬೆಳಗಾಲಪೇಟೆ, ಬಮ್ಮನಹಳ್ಳಿ, ಗೊಂದಿ ಹೊಸ ವಿದ್ಯುತ್ ಗ್ರಿಡ್‌ಗಳ ಟೆಂಡರ್‌ಗೆ ಕ್ರಮ ಜರುಗಿಸಿ ಒಂದೆರಡು ತಿಂಗಳಿನಲ್ಲಿ ಕಾಮಗಾರಿ ಆರಂಭಕ್ಕೆ ಪ್ರಾಮಾಣಿಕ ಯತ್ನ ಮಾಡುತ್ತೇವೆ. ಪರಿವರ್ತಕಗಳಲ್ಲಿ ಕೇಬಲ್, ಎಲ್‌ಟಿ ಕಿಟ್, ಇಂಧನ ಬೇಕಿದ್ದರೆ ಕೂಡಲೇ ನೀಡುತ್ತೇವೆ. ಇದಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ಐಪಿ ಸೆಟ್‌ಗಳ ಹಳೆಯದಾದ ತಂತಿಗಳನ್ನು ಆದ್ಯತೆ ಮೇಲೆ ಬದಲಾಯಿಸುತ್ತೇವೆ. ಇದರಲ್ಲಿ ಡೇಂಜರ್ ಝೋನ್‌ಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಶೀಘ್ರ ಸಂಪರ್ಕ ಯೋಜನೆಯಲ್ಲಿ ರೈತರು ಹಣ ಸಂದಾಯ ಮಡಿದರೆ ತಕ್ಷಣ ಪರಿವರ್ತಕ ಒದಗಿಸಿ, ಕಂಬ ತಂತಿ ಹಾಕಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಹೆಸ್ಕಾಂ ಸಿಬ್ಬಂದಿ ರೈತರೊಂದಿಗೆ ಸೌಜನ್ಯದಿಂದ ವರ್ತಿಸಲು ಕಟ್ಟಪ್ಪಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೆಪಿಟಿಸಿಎಲ್ ಮೇಜರ್ ವರ್ಕ್ ಇಇ ವಿಜಯ ಜೋಶಿ ಮಾತನಾಡಿ, ವಿದ್ಯುತ್ ಸಂಪರ್ಕದ ವಿಷಯದಲ್ಲಿ ರೈತರ ಸಮಸ್ಯೆಗಳಿಗೆ ವಿಳಂಬವಿಲ್ಲದೆ ಸೇವೆ ಒದಗಿಸುತ್ತೇವೆ. ರೈತರು ಕೂಡ ಸಹಕಾರ ನೀಡಬೇಕು. ಮಳೆಗಾಲದ ಸಂದರ್ಭದಲ್ಲಿ ಕೆಲವೆಡೆ ಆಗಿರುವ ದೋಷಗಳನ್ನು ಶೀಘ್ರ ಸರಿಪಡಿಸಲಾಗುತ್ತದೆ. ಬೆಳಗಾಲಪೇಟೆ, ಬೊಮ್ಮನಹಳ್ಳಿ, ಗೊಂದಿ ಗ್ರಿಡ್‌ಗಳ ಟೆಂಡರ್ ಕಾಮಗಾರಿ ವಿಷಯದಲ್ಲಿ ವಿಶೇಷ ಕಾಳಜಿವಹಿಸಿ ಕೆಲಸ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಶೇಷಗಿರಿ ಸಮ್ಮಸಗಿ ಗ್ರಿಡ್‌ಗಳ ನಿರ್ವಹಣೆ ಲೋಪದಿಂದ ರೈತರಿಗೆ ವಿದ್ಯುತ್ ಸಿಗುತ್ತಿಲ್ಲ. ಜಂಗಲ್ ಕಟಿಂಗ್, ವಿದ್ಯುತ್ ಕಂಬಕ್ಕೆ ಏರಿದ ಬಳ್ಳಿಗಳನ್ನು ತೆಗೆಯದೇ ಇರುವುದು ಸಮಸ್ಯೆಯಾಗಿದೆ. ತಾಲೂಕಿನಲ್ಲಿ ರೈತರ ಪಂಪಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ರೈತರಿಗೆ ಹೆಸ್ಕಾಂ ಹೇಳುವಷ್ಟು ಹಣ ಭರಣಾ ಮಾಡಿ ವಿದ್ಯುತ್ ಪಡೆಯುವ ಆರ್ಥಿಕ ಶಕ್ತಿ ಇಲ್ಲ. ಅಕ್ರಮ-ಸಕ್ರಮದಲ್ಲಿಯೇ ಹೆಸ್ಕಾಂ ಎಲ್ಲ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.
ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಾದ ಹಾನಗಲ್ಲ ಎಇಇ ವಿ.ಎಸ್.ಮರಿಗೌಡರ, ವಾಗೀಶ ಕಡತಿ, ಎಇಇ ರುದ್ರಮುನಿ, ಇಲಾಖೆಯ ವಿವಿಧ ಸಿಬ್ಬಂದಿ, ರೈತ ಮುಖಂಡರಾದ ರುದ್ರಪ್ಪ ಹಣ್ಣಿ, ಮಹೇಶ ವಿರುಪಣ್ಣನವರ, ಶ್ರೀಧರ ಮಲಗುಂದ, ಮಾಲತೇಶ ಪರಪ್ಪನವರ, ಸೋಮಣ್ಣ ಜಡೆಗೊಂಡರ, ರವಿ ಸಂಕಪಾಳೆ, ಶಂಕ್ರಗೌಡ ಪಾಟೀಲ, ಎಂ.ಎಂ.ಬಡಗಿ, ಮೂಕಯ್ಯ ಗುರುಲಿಂಗಮ್ಮನವರ ಇತರರಿದ್ದರು.