Haveri, Youth Congress, Protest, for NEET Problems,  
ಹಾವೇರಿ

ನೀಟ್ ಹಗರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ; ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಆಗ್ರಹ

ಹಾವೇರಿ: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದು ಮಾಡಿರುವ ಕ್ರಮ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಪ್ರತಿಭಟಿಸಲಾಯಿತು.
ಕೇಂದ್ರ ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ಪ್ರಾಯವಾಗಿದೆ. ನೀಟ್ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವುದು ಹೇಯ ಕೃತ್ಯವಾಗಿದೆ.
ಕೇಂದ್ರ ಬಿಜೆಪಿ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಮುಳುಗಿದೆ. ಈಗ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪ್ರತಿ ವಿದ್ಯಾರ್ಥಿಯಿಂದ 30 ಲಕ್ಷ ಹಣ ಪಡೆದು ಪ್ರಶ್ನೆಗಳನ್ನು ಸೋರಿಕೆ ಮಾಡಲಾಗಿದೆ. ಸಿಬಿಐ ತನಿಖೆಗೆ ವಹಿಸುವುದು ಬೇಡ, ನ್ಯಾಯಾಂಗ ತನಿಖೆಗೆ ಒಪ್ಪಿಸಿ. ಏಕೆಂದರೆ ಕೇಂದ್ರ ಸರ್ಕಾರದ ಒಂದು ಅಂಗ ಸಂಸ್ಥೆ ಇದಾಗಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಮೂರ್ತಿ ಒಬ್ಬರನ್ನು ನೇಮಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಕೇಂದ್ರ ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳ ಜೀವನದ ಜತೆ ಆಡವಾಡುತ್ತಿದೆ. ಇದನ್ನು ನಾವು ಸಹಿಸಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಯಾರದೇ ಕೈವಾಡ ಇರಲಿ ತಕ್ಕ ಶಿಕ್ಷೆ ಆಗಬೇಕು. ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಕಾರ್ಯಕರ್ತರಾದ ಶಂಕರ ಮೆಹರವಾಡೆ, ಹಿರೇಕೆರೂರಿನ ಗುಲಾಮ್ ರಜಾ ಬೊಗಳಿ, ಹಾವೇರಿ ಗ್ರಾಮೀಣ ಅಧ್ಯಕ್ಷ ಸಂತೋಷ ಲಮಾಣಿ, ಮಹಾಂತೇಶ ಮಕರವಳ್ಳಿ, ಜಮೀರ್ ಜಿಗರಿ, ಸುಧೀರ ಲಮಾಣಿ, ನಾಗರಾಜ ಬಡೆಮ್ಮನವರ, ಮಂಜುನಾಥ ಲಕ್ಮಾಪುರ, ವಿನಯ ಪಾಲನಕರ, ಹಸನ್ ಮುಲ್ಲಾ, ಖಾದರ್‌ಸಾಬ ಗಡ್ಡದ, ಯಲ್ಲಪ್ಪ ಶಿಗ್ಗಾಂವಿ, ಇತರರಿದ್ದರು.