ಹಾವೇರಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಮ್ಯಾರಥಾನ್ ನಲ್ಲಿ ಮಹಿಳೆಯರ ಜತೆಗೆ ಮಕ್ಕಳಿಗೆ ಅವಕಾಶ ನೀಡಿ, ಅವ್ಯವಸ್ಥೆ ತೋರಿದ್ದಕ್ಕೆ ಮಹಿಳೆಯರು ಆಯೋಜಕರ ವಿರುದ್ಧ ಗರಂ ಆಗಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿ ಮ್ಯಾರಥಾನ್ ಹಾಗೂ ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
5 ಕಿಮೀ ಹಾಗೂ 3 ಕಿಮೀ ಪ್ರತ್ಯೇಕವಾದ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಪ್ರತ್ಯೇಕವಾಗಿ 10 ಸಾವಿರ, 8 ಸಾವಿರ, 6 ಸಾವಿರದಿಂದ 500 ರೂ.ವರೆಗೆ ಬಹುಮಾನ ಘೋಷಿಸಲಾಗಿತ್ತು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮ್ಯಾರಥಾನ್ ಗೆ ಚಾಲನೆ ನೀಡಿದರು.
ಸ್ಫರ್ಧೆಯಲ್ಲಿ 12 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿತ್ತು. 18 ವರ್ಷದ ಒಳಗಿನ ಮಕ್ಕಳು ಎಲ್ಲ ಬಹುಮಾನ ಗಿಟ್ಟಿಸಿಕೊಂಡರು. 45, 50, 60 ವರ್ಷದ ಮಹಿಳೆಯರು ಓಡಿ ಬರುವ ಮುಂಚೆಯೇ ಬಹುಮಾನ ಕೊಟ್ಟು ಕಳುಹಿಸಲಾಗಿತ್ತು.
ಇದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಕುರಿತು ಮಹಿಳೆಯರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. 18 ವರ್ಷದ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಬೇಕಿತ್ತು. ಸ್ಪರ್ಧೆಯಲ್ಲಿ ಎಲ್ಲ ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿನಿಯರೇ ವಿಜೇತರಾಗಿದ್ದಾರೆ. ಮಕ್ಕಳೊಂದಿಗೆ ನಾವು ಓಡಲು ಆಗುತ್ತಾ? ಇದು ಮಹಿಳೆಯರಿಗೆ ಮಾಡಿದ ಅನ್ಯಾಯವಾಗಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಎಸ್ ಪಿ ಅವರ ಸಮ್ಮುಖದಲ್ಲಿ ಈ ರೀತಿ ನಡೆದರೂ ಯಾರೂ ಏಕೆ ಗಮನಿಸಿಲ್ಲ ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
ವಿಜೇತರ ಪಟ್ಟಿಯನ್ನೂ ಕ್ರೀಡಾ ಇಲಾಖೆ ಎಡಿ ಲತಾ ಬಿ.ಎಚ್. ಮಾಧ್ಯಮಗಳಿಗೆ ಬಿಡುಗಡೆ ಮಾಡಲಿಲ್ಲ. ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ರೂ. ಖರ್ಚು ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಂದಾಜು 50 ಸಾವಿರ ರೂ. ಬಹುಮಾನ ನೀಡಿದ್ದಾರೆ. ಎಲ್ಲದರಲ್ಲೂ ಶಾಲಾ ಮಕ್ಕಳು ವಿಜೇತರಾಗಿದ್ದಾರೆ. ಆಯೋಜಕರು ತಮಗೆ ಬೇಕಾದವರನ್ನು ಗೆಲ್ಲಿಸಿ ಭಾರಿ ಮೊತ್ತದ ಬಹುಮಾನ ಕೊಡಲು ಈ ರೀತಿ ಕುತಂತ್ರ ಮಾಡಿದ್ದಾರೆ. ಕ್ರೀಡಾ ಇಲಾಖೆಯಲ್ಲಿ ಪದೇಪದೆ ಇಂತಹ ಅವ್ಯವಸ್ಥೆ ಕಾಣುತ್ತದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಹಿಳೆಯರು ಆಗ್ರಹಿಸಿದರು.
ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಮೊದಲ ಎರಡು ಬಹುಮಾನ (18,000 ರೂ.) ಪಡೆದಿದ್ದಾರೆ. ಇದು ಜಿಲ್ಲೆಯ ಮಹಿಳೆಯರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮ. ಅಧಿಕಾರಿಗಳು ತಮ್ಮ ಸಂಬಂಧಿಕರನ್ನು ಕರೆಸಿ, ಆಡಿಸಿ ಬಹುಮಾನ ಕೊಟ್ಟು ಕಳುಹಿಸಿದ್ದಾರೆ. ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರಿಗೆ ಪ್ರಾತಿನಿದ್ಯ ಕೊಡಬೇಕಿತ್ತು. ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ ಮಾಡಬಹುದಿತ್ತು. ಅಧಿಕಾರಿಗಳ ಕಣ್ಣುದುರಲ್ಲೇ ಮಹಿಳೆಯರಿಗೆ ಇಂತಹ ಅನ್ಯಾಯ ನಡೆದಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉತ್ತರಿಸಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಬೇಕು.