womens day, govt eployees,
ಹಾವೇರಿ: ಮಹಿಳೆ ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ, ಮಡದಿಯಾಗಿ ಮನೆ ಬೆಳಗುವ ಜ್ಯೋತಿಯಾಗಿ, ಕಷ್ಟ ಕಾರ್ಪಣ್ಯ ಎದುರಿಸುವ ಯೋಗಿನಿಯಾಗಿ, ಸೂರ್ತಿಯ ಸೆಲೆಯಾಗಿ ಮನೆಯ ಹೊರಗೂ, ಒಳಗೂ ಗಂಡಿನ ಹೆಗಲಿಗೆ ಹೆಗಲಾಗಿ ಪ್ರತಿ ಹೆಜ್ಜೆಯಲ್ಲೂ ಇರುತ್ತಾಳೆ. ಕುಟುಂಬ, ಸಮಾಜ, ದೇಶಕ್ಕೆ ಮಹಿಳೆಯ ಕೊಡುಗೆ ಅಪಾರವಾದುದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಕೊಂಡಾಡಿದರು.
ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಜಿಲ್ಲಾ ಘಟಕದಿಂದ ನಗರದ ಜಿಲ್ಲಾ ಗುರುಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾರ್ಯಾಗಾರ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಗೃಹಿಣಿಯಾಗಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾಳೆ ಎಂದರೆ ಅದು ಆಕೆಯ ಯೋಗ್ಯತೆ, ದುರ್ಬಲತೆಯಲ್ಲ. ಗೌರವ, ಪ್ರೀತಿ, ಮಮತೆಯ ಸಹಾನುಭೂತಿಯಿಂದ ಕೆಲಸ ಮಾಡುತ್ತಾರೆ. ಎಲ್ಲವನ್ನೂ ನಿಭಾಯಿಸುವ ಸೃಷ್ಟಿಯ ಕೊಡುಗೆ, ಅಪ್ರತಿಮ ಶಕ್ತಿಯೇ ಹೆಣ್ಣು. ಮಹಿಳೆಯ ಸ್ಥಾನಮಾನ, ಹಕ್ಕು, ಸಮಸ್ಯೆಗಳ ಬಗ್ಗೆ ಚಿಂತನೆ ಮಾಡುವ ಸಂದರ್ಭವೇ ಈ ಕಾರ್ಯಕ್ರಮವಾಗಿದೆ. ಸ್ತ್ರೀ ಶಕ್ತಿಯನ್ನು ಆರಾಧಿಸುವ ದೇಶ ನಮ್ಮದಾಗಿದೆ. ಹಾವೇರಿಯಲ್ಲಿ ಜಿಪಂ ಸಿಇಒ, ಎಸ್‌ಪಿ, ಎಸಿ, ತಹಸೀಲ್ದಾರ್, ಆರ್‌ಟಿಒ ಸೇರಿದಂತೆ ಹಲವು ಹುದ್ದೆಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸಂಘದ ರಾಜ್ಯಾಧ್ಯಕ್ಷೆ ಶೈಲಜಾ ವಿ.ಗೌಡರ ಮಾತನಾಡಿ, ಹೆಣ್ಣು ಅಬಲೆಯಲ್ಲ. ಇಡೀ ಜಗತ್ತನ್ನು ಆಳಬಲ್ಲ ಶಕ್ತಿಯುಳ್ಳವಳಾಗಿದ್ದಾಳೆ. ಪ್ರಕೃತಿಯ ಸೃಷ್ಟಿಯಾಗಿರುವ ಹೆಣ್ಣಿಲ್ಲದ ಜಗತ್ತು, ಕುಟುಂಬವನ್ನು ಊಹಿಸಲು ಸಾಧ್ಯವಿಲ್ಲ ಎಂದರು.
ಸಂಘದ ಜಿಲ್ಲಾಧ್ಯಕ್ಷೆ ಅಕ್ಕಮಹಾದೇವಿ ಕಾಕೋಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ ಹಿರೇಮಠ, ಡಿಡಿಪಿಐ ಮೋಹನ ದಂಡಿನ, ಬಿಇಒ ಎಂ.ಎಚ್.ಪಾಟೀಲ, ವೀಣಾ ಹೊಸಮನಿ, ರೇಷ್ಮಾ ಬಳ್ಳಾರಿ, ಭಾಗ್ಯ ಎಂ.ಕೆ., ರೇವತಿ ಹೊಸಮಠ, ಜಯಶ್ರೀ ಪಾಟೀಲ, ತನುಜಾ, ಲತಾ ಬಿ.ಎಚ್., ಆಶು ನದಾಫ, ಎ.ಟಿ.ನೀರಲಗಿ, ಶಾಹಿನಾ ಬೇಗಂ, ವಿಜಯಮ್ಮ ಪಾಟೀಲ, ದಾಕ್ಷಾಯಣಿ ವಾಲ್ಮೀಕಿ, ಮತ್ತಿತರು ಉಪಸ್ಥಿತರಿದ್ದರು.
ಹಲವೆಡೆ ಮಹಿಳೆ ಎನ್ನುವ ಕಾರಣಕ್ಕೆ ಜವಾಬ್ದಾರಿ ಕೊಡಲು ಹಿಂಜರಿಯುತ್ತಾರೆ. ಪುರುಷ, ಮಹಿಳೆ ಪ್ರಕೃತಿದತ್ತವಾಗಿ ಬಂದ ಬಳುವಳಿಯಾಗಿದ್ದು, ಮನೆಯಿಂದಲೇ ಸಮಾನತೆ ಶುರುವಾಗಬೇಕು. ನಮ್ಮ ಮಕ್ಕಳಿಗೂ ಸಮಾನತೆ ಕೊಡಬೇಕು. ಯಾವ ಕೆಲಸಕ್ಕೂ ಹಿಂಜರಿಕೆ ಬೇಡ. ಆತ್ಮಸಾಕ್ಷಿ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ. ನೌಕರರಿಗೆ ಕೆಲಸ ಮಾಡುವ ಅಹಂ ಬೇಡ. ಮನೆಯಲ್ಲಿ ಗೃಹಿಣಿಯಾಗಿ, ಕಚೇರಿಯಲ್ಲಿ ಅಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಎಸ್‌ಪಿ ಯಶೋಧಾ ವಂಟಗೋಡಿ ಹೇಳಿದರು.
ಜಾನಪದ ವಿದ್ವಾಂಸ ಡಾ.ಶಂಭು ಬಳಿಗಾರ ಉದ್ಯೋಗಸ್ಥ ಮಹಿಳೆ ಎದುರಿಸುತ್ತಿರುವ ತಲ್ಲಣಗಳು ವಿಷಯದ ಕುರಿತು, ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಉದ್ಯೋಗಸ್ಥ ಮಹಿಳೆಯರಿಗೆ ಆರೋಗ್ಯ ಸೂತ್ರಗಳು ಕುರಿತು ಉಪನ್ಯಾಸ ನೀಡಿದರು. ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಹಿಳಾ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಮಹಿಳೆಯರು ಭ್ರೂಣಹತ್ಯೆ, ಲಿಂಗ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಹೀಗೆ ಅನೇಕ ದೌರ್ಜನ್ಯ ಎದುರಿಸುತ್ತಿರುವುದು ವಿಷಾದನೀಯ. ಮನೆಯ ನಂದಾದೀಪ ಆಗಿರುವ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ದೇಶಕ್ಕೆ ಮಹಿಳೆಯರ ಪಾತ್ರ ದೊಡ್ಡದಿದ್ದು, ಮೌಲ್ಯಾಧಾರಿತ ಕುಟುಂಬಗಳು, ಸುಸಜ್ಜಿತ ಸಮಾಜದ ಅಡಿಯಲ್ಲಿ ಮುನ್ನಡೆಯಬೇಕು. ಜಿಲ್ಲಾಡಳಿತ ತಮ್ಮ ಜತೆಗೆ ಸದಾಕಾಲ ಇರುತ್ತದೆ.