Haveri, Varada River, Labours, Searching, Gold,
ಹಾವೇರಿ: ಜಿಲ್ಲೆಯ ಜೀವನಾಡಿ ವರದಾ ನದಿ ಬೇಸಿಗೆಯ ಬಿಸಿಲಿಗೆ ಬತ್ತಿ ಹೋಗಿದ್ದು, ಅಲ್ಲಲ್ಲಿ ನೀರು ನಿಂತಿರುವ ಗುಂಡಿಗಳಲ್ಲಿ ಹತ್ತಾರು ಜನ ಮರಳು ಮಿಶ್ರಿತ ಮಣ್ಣು ಸಂಗ್ರಹಿಸಿ ಅದರಲ್ಲಿ ಚಿನ್ನದ ಕಣಗಳಿಗಾಗಿ ಶೋಧ ನಡೆಸಿರುವ ದೃಶ್ಯ ಶನಿವಾರ ಕಂಡುಬಂತು.
ಶಿವಮೊಗ್ಗ ಮೂಲದ ಇರ್ಲರ್ ಸಮುದಾಯದ ಜನರು ಕುಟುಂಬಸಮೇತರಾಗಿ ಹಾವೇರಿಗೆ ಬಂದಿದ್ದು, ವರದಾ ನದಿಯ ಒರತೆಗಳಲ್ಲಿ ಚಿನ್ನದ ಕಣಗಳಿಗಾಗಿ ಹುಡುಕಾಟ ಶುರುಮಾಡಿದ್ದಾರೆ.
ಮಳೆಗಾಲದಲ್ಲಿ ಉಕ್ಕಿ ಹರಿಯುವ ವರದಾ ನದಿ, ಬೇಸಿಗೆ ಬರುತ್ತಿದ್ದಂತೆ ಒಣಗುತ್ತದೆ. ಬೇಸಿಗೆ ವೇಳೆ ಅಲ್ಲಲ್ಲಿ ಗುಂಡಿಗಳಲ್ಲಿ ನೀರು ನಿಂತಿದೆ. ಈ ಗುಂಡಿಗಳತ್ತ ದಾಂಗುಡಿ ಇಟ್ಟಿರುವ ಇರ್ಲರ್ ಸಮುದಾಯದವರು, ಗುಂಡಿಗಳ ಮಧ್ಯದಲ್ಲಿರುವ ಮರಳು ಮಿಶ್ರಿತ ಮಣ್ಣನ್ನು ಬುಟ್ಟಿಗಳಲ್ಲಿ ಸಂಗ್ರಹಿಸುತ್ತಾರೆ. ನಂತರ ಅದನ್ನು ನೀರಿನಲ್ಲಿ ತೊಳೆಯುತ್ತ ಮಣ್ಣು, ಮರಳು ಬೇರ್ಪಡಿಸುತ್ತಾರೆ. ಕೊನೆಯಲ್ಲಿ ಸಿಗುವ ಅಲ್ಪಸ್ವಲ್ಪ ಚಿನ್ನದ ಕಣಗಳನ್ನು ಸಂಗ್ರಹಿಸುತ್ತಾರೆ.
ಚಿನ್ನದ ಕಣಗಳ ಹುಟುಕಾಟದ ಪ್ರಕ್ರಿಯೆ ಅತ್ಯಂತ ಕಠಿಣವಾಗಿದೆ. ಕಪ್ಪು ಮಣ್ಣು ನೀರಿನಲ್ಲಿ ತೇಲಿ ಹೋಗುತ್ತದೆ. ನಂತರ ಮರಳನ್ನು ಬೇರ್ಪಡಿಸುತ್ತಾರೆ. ಕೊನೆಯಲ್ಲಿ ಭಾರವಾದ ಚಿನ್ನದ ಕಣಗಳು ಮಿನುಗುತ್ತವೆ. ಈ ಚಿನ್ನದ ಕಣಗಳಿಗಾಗಿ ಇವರು ಗಂಟೆಗಟ್ಟಲೇ ಶೋಧ ನಡೆಸುತ್ತಾರೆ.
ಹೊಟ್ಟೆಪಾಡಿಗಾಗಿ ದಿನವಿಡೀ ಶ್ರಮ
ಚಿನ್ನದ ಬೆಲೆ ಗಗನಮುಖವಾಗಿದ್ದು, ಬಡವರ ಕೈಗೆ ಎಟುಕದಂತಾಗಿದೆ. ದಿನಪೂರ್ತಿ ವರದಾ ನದಿಯಲ್ಲಿ ಹುಡುಕಾಡಿದರೂ ಗುಂಜಿ ಬಂಗಾರ ಸಿಕ್ಕರೂ ಸಾಕು ಎಂದು ಕುಟುಂಬಸಮೇತರಾಗಿ ಇವರು ಚಿನ್ನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸಿಕ್ಕ ಅಲ್ಪ ಬಂಗಾರವನ್ನು ಅಕ್ಕಸಾಲಿಗರಿಗೆ ನೀಡಿ, ಅವರು ಕೊಟ್ಟಷ್ಟು ಹಣ ಪಡೆದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಈ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಈ ತಂಡದ ಹಿರಿಯರು.
ನಮ್ಮ ಅಜ್ಜನ ಕಾಲದಿಂದಲೂ ನಾವು ಇದೇ ಕೆಲಸ ಮಾಡುತ್ತಿದ್ದೇವೆ. ಪ್ರತಿ ವರ್ಷ ಬರುತ್ತೇವೆ. ಒಂದು ತಿಂಗಳು ನದಿ ಪಾತ್ರದಲ್ಲೇ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತೇವೆ. ನಂತರ ಅಡಕೆ, ತೆಂಗು ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತೇವೆ. ನೀರು ನಿಂತ ಗುಂಡಿಗಳಲ್ಲಿ ಕಪ್ಪು ಮಣ್ಣು, ಮರಳಿನಲ್ಲಿ ಚಿನ್ನದ ಕಣಗಳನ್ನು ಹುಡುಕಿ ಮಾರುತ್ತೇವೆ. ದಿನಕ್ಕೆ 200ರಿಂದ 300 ರೂ. ಸಿಗುತ್ತದೆ. ಅದರಲ್ಲೇ ಜೀವನ ಸಾಗಿಸುತ್ತೇವೆ.