Haveri, University, Exam, Fees, hike, Kallihal, SC, ST, College, Protest,
ಹಾವೇರಿ: ವಿಶ್ವವಿದ್ಯಾಲಯದ ವ್ಯಾಪ್ತಿಯ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಹಾಗೂ ಈ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ತಾಲೂಕಿನ ಕಳ್ಳಿಹಾಳ ಗ್ರಾಮದ ಸರ್ಕಾರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಸತಿಯುತ ಪ್ರಥಮ ದರ್ಜೆ ಕಾಲೇಜ್ ಎದುರು ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟಿಸಿದರು.
ಕಾಲೇಜ್ ಪ್ರಾಂಶುಪಾಲರ ಮೂಲಕ ವಿಶ್ವವಿದ್ಯಾಲಯದ ಕುಲಪತಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಹಾವೇರಿ ವಿಶ್ವವಿದ್ಯಾಲಯವು 2025-26ನೇ ಸಾಲಿನಲ್ಲಿ ನಡೆಯುವ ಬಿಎ, ಬಿಕಾಂ, ಹಾಗೂ ಬಿಎಸ್ಸಿ ಪದವಿಯ ಎಲ್ಲ ಸೆಮಿಸ್ಟರ್ ಪರೀಕ್ಷೆಗಳ ಶುಲ್ಕವನ್ನು ವಿಶ್ವವಿದ್ಯಾಲಯವು ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ, ಘಟಿಕೋತ್ಸವ ಅರ್ಜಿ ಸೇರಿದಂತೆ ವಿವಿಧ ಹೆಸರುಗಳಲ್ಲಿ 1,095 ರೂಪಾಯಿ ಹಾಗೂ ವೃತಿಪರ ತರಬೇತಿ ಮೌಖಿಕ ಪರೀಕ್ಷೆಗೆ 550 ರೂಪಾಯಿ ಶುಲ್ಕ ವಿಧಿಸಿದೆ. ಇದು ಖಂಡನೀಯ.
ಬಿಎ, ಬಿಕಾಂ, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಅರ್ಜಿ ಶುಲ್ಕ, ನಕಲು ಸರ್ಟಿಫಿಕೇಟ್, ಶ್ರೇಣಿ ಪ್ರಮಾಣ ಪತ್ರ ಸೇರಿದಂತೆ ಇತರೆ ಅನಗತ್ಯ ಶುಲ್ಕಗಳನ್ನು ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು. ಸರ್ಕಾರ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆದಾಯಮಿತಿ ಒಳಗೆ ಬರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿದ ವಿದ್ಯಾರ್ಥಿಗಳಿಗೆ ವಿನಾಯ್ತಿ ಘೋಷಣೆ ಮಾಡಿದೆ. ಆದರೆ ಈ ವಿಶ್ವವಿದ್ಯಾಲಯವು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಎಸ್ಸಿ ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿನಿಯರಿಂದ ಸಂಪೂರ್ಣ ಶುಲ್ಕವನ್ನು ತೆಗೆದುಕೊಳ್ಳುವ ಮೂಲಕ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿಶ್ವವಿದ್ಯಾಲಯವು ದಿಢೀರ್ ಆಗಿ ಪರೀಕ್ಷಾ ಶುಲ್ಕ ಏರಿಕೆ ಮಾಡಿದ್ದರಿಂದ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಸರ್ಕಾರಿ ಕಾಲೇಜ್, ವಿವಿಗಳಲ್ಲಿ ಇಷ್ಟೊಂದು ದುಬಾರಿ ಶುಲ್ಕ ಕೇಳಿದರೆ ಹೇಗೆ ವಿದ್ಯಾಭ್ಯಾಸ ಮಾಡಲು ಸಾಧ್ಯ. ಈ ಕೂಡಲೇ ಶುಲ್ಕ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಅರುಣ ನಾಗಾವತ, ಗುದ್ಲೇಶ ಇಚ್ಚಂಗಿ, ಆಕಾಶ ನಾಗಣ್ಣನವರ, ಮಹಾಂತೇಶ ಯಲಗಚ್ಚ, ಜಯಂತಿ ಗೋಣಿ, ಶಿವರಾಜ ಬಿದರಿ, ಭಾಗ್ಯಲಕ್ಷ್ಮೀ ಪಾಟೀಲ, ರಕ್ಷಿತಾ ಎತ್ತಿನಹಳ್ಳಿ, ಮೇಘಾ ಹಡಪದ, ಶೋಭಾ ಅಂಬಿಗೇರಿ, ಮುಕ್ತ ಬರಲಿಂಗಣ್ಣನವರ, ಕಾವ್ಯಾ ಅಣ್ಣಿ, ಸಚಿನ್ ಗಾಜಿ, ನಂದಿನಿ ಡಬ್ಬಲಿ, ಸೌಮ್ಯ ಪಾಟೀಲ, ಬಸವರಾಜ ಮೂಲಿಮನಿ, ಶಿವಕುಮಾರ ಮೂಲಿಮನಿ, ಚೇತನ ಸವಣೂರ, ಇತರರಿದ್ದರು.