Haveri, Traffic Police, Penalty, Without Uniform,
ಹಾವೇರಿ: ನಗರದ ಬಸ್ ನಿಲ್ದಾಣದ ಬಳಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಸಮವಸ್ತ್ರ ಧರಿಸದೇ ದ್ವಿಚಕ್ರ ವಾಹನಗಳನ್ನು ತಡೆದು, ದಂಡ ಸಂಗ್ರಹಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಿಬ್ಬಂದಿಯೊಬ್ಬರು, ಹಾವೇರಿ ಸಂಚಾರ ಪೊಲೀಸರು ಹಾಗೂ ಇಬ್ಬರು ಗೃಹರಕ್ಷಕರ ಜತೆ ಸೇರಿ ದಂಡ ವಸೂಲಿಗೆ ನಿಂತಿದ್ದರು. ಸಮವಸ್ತ್ರ ಧರಿಸದೇ, ಜನಸಾಮಾನ್ಯರಂತೆ ಇತರ ಪೊಲೀಸರೊಂದಿಗೆ ಸೇರಿ ವಾಹನಗಳನ್ನು ಅಡ್ಡಗಟ್ಟಿ ವಸೂಲಿಗೆ ನಿಂತಿದ್ದರು. ಆ ಸಿಬ್ಬಂದಿ ದಂಡ ರಸೀದಿ ಕೊಡುವ ಯಂತ್ರವನ್ನು ಕೈಯಲ್ಲಿ ಹಿಡಿದು ಪರಿಶೀಲಿಸುತ್ತಿರುವ ಫೋಟೋ ವೈರಲ್ ಆಗಿದೆ. ಪೊಲೀಸ್ ಸಮಸವಸ್ತ್ರ ಇಲ್ಲದೇ ಜನರ ವಾಹನ ಅಡ್ಡಗಟ್ಟಿ ದಂಡ ವಸೂಲಿ ಮಾಡಲು ಇವರಿಗೆ ಅನುಮತಿ ನೀಡಿದವರು ಯಾರು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ನಾನು ಹಾವೇರಿ ಸಂಚಾರ ಠಾಣೆ ಪಿಎಸ್‌ಐ ಆಗಿ ಬಂದ ಬಳಿಕ ಇಂತಹ ಯಾವುದೇ ಘಟನೆ ನಡೆದಿಲ್ಲ. ಕಡ್ಡಾಯವಾಗಿ ಯೂನಿಫಾರಂ ಧರಿಸಿದವರು ಮಾತ್ರ ಕರ್ತವ್ಯ ಮಾಡಲು ಸೂಚಿಸಿದ್ದೇನೆ. ಇದು ಕಳೆದ ವರ್ಷದ ಫೋಟೋ. ಹಳೆಯ ಫೋಟೋ ಪೋಸ್ಟ್ ಮಾಡಿ ಗೊಂದಲ ಸೃಷ್ಟಿಸಲು ಯತ್ನಿಸಿದ್ದು, ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಟ್ರಾಫಿಕ್ ಪಿಎಸ್‌ಐ ಶೈಲಶ್ರೀ ‘ವಿಜಯವಾಣಿ’ಗೆ ತಿಳಿಸಿದ್ದಾರೆ.