bus, chain, snatching 
ಹಾವೇರಿ

ಚಿನ್ನದ ಸರ ಕಳವು, ಬಸ್ ಸಮೇತ ಠಾಣೆಗೆ ಬಂದ ಮಹಿಳೆ !; ಪ್ರಯಾಣಿಕರ ಬ್ಯಾಗ್ ಚೆಕ್

ಹಾವೇರಿ: ಸಾರಿಗೆ ಬಸ್‌ನಲ್ಲಿ 10 ಗ್ರಾಂ ಚಿನ್ನದ ಸರ ಕಳೆದುಕೊಂಡ ಮಹಿಳೆ ಬಸ್ ಸಮೇತ ಹಾವೇರಿಯ ಶಹರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ಅಪರೂಪದ ಘಟನೆ ಶುಕ್ರವಾರ ನಡೆದಿದೆ.
ಹಾನಗಲ್ಲ ತಾಲೂಕು ಹಿರೇಬಾಸೂರು ಗ್ರಾಮದ ನಿವಾಸಿ ಮೀನಾಕ್ಷಮ್ಮ ನಗರದಲ್ಲಿ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟಿದ್ದ 10 ಗ್ರಾಂ ಚಿನ್ನದ ಸರ ಬಿಡಿಸಿಕೊಂಡು ಬಸ್‌ನಲ್ಲಿ ಊರಿನತ್ತ ಹೊರಟಿದ್ದರು. ಈ ವೇಳೆ ಚಿನ್ನದ ಸರ ಕಳವಾಗಿದೆ. ಇದರಿಂದ ಕಂಗಾಲಾದ ಮಹಿಳೆ ಬಸ್ ಸಮೇತ ಶಹರ ಠಾಣೆಗೆ ಆಗಮಿಸಿದ್ದರು.
‘ಬಸ್ ಹತ್ತಿದಾಗ ಪರ್ಸ್‌ನಲ್ಲಿ ಚಿನ್ನದ ಸರ ಇಟ್ಟುಕೊಂಡಿದ್ದು ನೋಡಿದ್ದೆ. ನಂತರ ಯಾರೋ ಜಿಪ್ ತೆಗೆದು ಸರ ಕದ್ದಿದ್ದಾರೆ. ದಯವಿಟ್ಟು ನನ್ನ ಚಿನ್ನದ ಸರ ಹುಡುಕಿಕೊಡಿ ಸಾರ್’ ಎಂದು ಕೋರಿದ್ದಾರೆ. ಈ ಕುರಿತು ಮಹಿಳೆ ಪ್ರಕರಣ ದಾಖಲಿಸಿಲ್ಲ, ಆದರೂ ಪರಿಶೀಲಿಸಲಾಗುವುದು ಎಂದು ಶಹರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಕರ ಬ್ಯಾಗ್ ಚೆಕ್
ಚಿನ್ನದ ಸರ ಕಳೆದುಕೊಂಡ ಮೀನಾಕ್ಷಮ್ಮ, ಪೊಲೀಸರ ಸಮ್ಮುಖದಲ್ಲಿ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರ ಬ್ಯಾಗ್‌ಗಳ ತಪಾಸಣೆ ಮಾಡಿದರು. ಆದರೂ ಅವರ ಚಿನ್ನದ ಸರ ಸಿಗಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಿ ಬಸ್‌ನಲ್ಲಿ ತೆರಳಿದರು. ಇದರಿಂದ ಸಹ ಪ್ರಯಾಣಿಕರ ಸಂಚಾರಕ್ಕೆ ವಿಳಂಭವಾಯಿತು.