Haveri, Totada yallapura, PUC, CET, exams, mother death,  
ಹಾವೇರಿ

ಹಾವೇರಿ; ತಾಯಿಯ ಸಾವಿನ ಶೋಕದ ನಡುವೆಯೂ ಸಿಇಟಿ ಬರೆದ ಮಗ ಲೋಕೇಶ

ಹಾವೇರಿ: ಹೆತ್ತ ತಾಯಿಯ ಸಾವಿನ ನೋವಿನ ನಡುವೆಯೂ ನಗರದ ಹೊರವಲಯ ತೋಟದಯಲ್ಲಾಪುರದ ವಿದ್ಯಾರ್ಥಿ ಲೋಕೇಶ ದೇವೇಂದ್ರಪ್ಪ ಯರೇಶೀಮಿ ಸಿಇಟಿ ಪರೀಕ್ಷೆ ಬರೆದಿದ್ದಾನೆ.
ಲೋಕೇಶನ ತಾಯಿ ಗಾಯತ್ರಿ ಯರೇಶೀಮಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಬುಧವಾರ ರಾತ್ರಿ ಮೃತಪಟ್ಟಿದ್ದರು. ಗುರುವಾರ ಬೆಳಗ್ಗೆ ಲೋಕೇಶ ಸಿಇಟಿ ಪರೀಕ್ಷೆ ಬರೆದು, ನಂತರ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾನೆ.
ದುಖಃದ ನಡುವೆಯೂ ಸಂಬಂಧಿಕರು, ಕುಟುಂಬದವರ ಒತ್ತಾಸೆ ಮೇರೆಗೆ ಪರೀಕ್ಷೆ ಬರೆದು ಶಿಕ್ಷಣ ಪ್ರೇಮೆ ಮೆರೆದಿದ್ದಾನೆ.
ಎಂಬಿಬಿಎಸ್, ನ್ಯೂರಾಲಜಿಸ್ಟ್ ಕನಸು
ಲೋಕೇಶನ ತಂದೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಲೋಕೇಶನ ಸಹೋದರ ಹಂಪಿಯಲ್ಲಿ ಬಿಸಿಎ ಓದುತ್ತಿದ್ದಾರೆ.
ನಗರದ ಎಂಆರ್ ಎಂ ಪಿಯ ಕಾಲೇಜ್ ನಲ್ಲಿ ಓದಿರುವ ಲೋಕೇಶ ಪಿಯುಸಿ ಪರೀಕ್ಷೆಯಲ್ಲಿ ಶೇ.91ರಷ್ಟು ಅಂಕ ಪಡೆದಿದ್ದಾ‌ನೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಎಂಬಿಬಿಎಸ್ ಪದವಿ ಮಾಡಿ, ನರರೋಗ ತಜ್ಞ ವೈದ್ಯನಾಗುವ ಕನಸು ಕಂಡಿದ್ದಾಗಿ ಲೋಕೇಶ 'ವಿಜಯವಾಣಿ'ಗೆ ತಿಳಿಸಿದ್ದಾನೆ.