tilavalli, audr, police, antarjati,
ಹಾವೇರಿ: ಅಂತರ್ಜಾತಿ ವಿವಾಹವಾಗಲು ಉಪ ನೋಂದಣಾಧಿಕಾರಿ ಕಚೇರಿಗೆ ತೆರಳುತ್ತಿದ್ದ ನವಜೋಡಿಯನ್ನು ತಡೆದು ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕರೆದೊಯ್ದ ಘಟನೆ ಹಾನಗಲ್ಲ ತಾಲೂಕು ತಿಳವಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ತಿಳವಳ್ಳಿ ಗ್ರಾಮದ ಯುವಕ ಮಣಿಕಂಠಸ್ವಾಮಿ ಹಾಗೂ ಕೆಲವರಕೊಪ್ಪ ಗ್ರಾಮದ ಯುವತಿ ಸೃಷ್ಟಿ ಕಾಲೇಜ್ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದು, ಇವರ ಮದುವೆಗೆ ಯುವತಿಯ ಪಾಲಕರ ಒಪ್ಪಿಗೆ ಇರಲಿಲ್ಲ. ವಿರೋಧದ ನಡುವೆ ಎರಡು ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆ ಆಗಿದ್ದರು.
ಬುಧವಾರ ರಿಜಿಸ್ಟ್ರಾರ್ ಮ್ಯಾರೇಜ್ ಆಗಲೆಂದು ಹಾನಗಲ್ಲ ಉಪ ನೋಂದಣಾಧಿಕಾರಿ ಕಚೇರಿಗೆ ಹೊರಟಿದ್ದರು. ಆಗ ಯುವತಿಯ ಪಾಲಕರು ಪ್ರೇಮಿಗಳಿದ್ದ ಕಾರು ಬೆನ್ನಟ್ಟಿ ಕಾರು ತಡೆದು, ತಿಳವಳ್ಳಿಯಲ್ಲಿ ಯುವಕ ಮಣಿಕಠಸ್ವಾಮಿಗೆ ಥಳಿಸಿದ್ದಾರೆ. ಯುವತಿ ತಮ್ಮೊಂದಿಗೆ ಬರಲು ನಿರಾಕರಿಸಿದರೂ ಬಲವಂತವಾಗಿ ಎಳೆದೊಯ್ದಿದ್ದಾರೆ.
ಪ್ರೇಯಸಿಯನ್ನು ವಾಪಸ್ ತನ್ನೊಂದಿಗೆ ಕಳುಹಿಸುವಂತೆ ಮಣಿಕಂಠಸ್ವಾಮಿ ಒತ್ತಾಯಿಸಿದ್ದಾರೆ. ಆಡೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.