Haveri, Teerthahalli, Tunga PU College, Free Admissions,
ಹಾವೇರಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದ ವಜ್ರ ಮಹೋತ್ಸವದ ಅಂಗವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮ ಕಾಲೇಜ್‌ನಲ್ಲಿ ಎರಡು ವರ್ಷ ಉಚಿತ ಶಿಕ್ಷಣ ನೀಡಲಾಗುವುದು ಎಂದು ಕಾಲೇಜ್ ಪ್ರಾಚಾರ್ಯ ಪ್ರಸನ್ನ ಕೆ.ಎಲ್. ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1967ರಲ್ಲಿ ಆರಂಭವಾದ ಈ ಕಾಲೇಜ್ ಮಲೆನಾಡು ಭಾಗದ ಜನರ ಜೀವನದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದೆ. ವಜ್ರ ಮಹೋತ್ಸವದ ನೆನಪಿಗಾಗಿ ಬಡ ಮಕ್ಕಳ ಶಿಕ್ಷಣಕ್ಕೆ ಸಂಸ್ಥೆ ಸಿದ್ಧವಾಗಿದೆ. ಶೇ.70ಕ್ಕಿಂತ ಹೆಚ್ಚುಂಕ ಪಡೆದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ವರ್ಷದ ಪಿಯುಸಿ ಶಿಕ್ಷಣ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುವುದು. ಅತೀ ಅಗತ್ಯವಿರುವ ಬಡ ವಿದ್ಯಾರ್ಥಿಗಳು ಇದಕ್ಕೂ ಕಡಿಮೆ ಅಂಕ ಪಡೆದಿದ್ದರೂ ಆದ್ಯತೆ ಮೇರೆಗೆ ಸೌಲಭ್ಯ ಒದಗಿಸಲಾಗುವುದು. ಊಟ ಮತ್ತು ವಸತಿಗೆ ಮಾತ್ರ ಸಾಮಾನ್ಯ ಶುಲ್ಕದೊಂದಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುವುದು. ಇಲ್ಲವೇ ಸರ್ಕಾರಿ ಹಾಸ್ಟೆಲ್ ಸೌಲಭ್ಯ ಪಡೆಯಬಹುದು ಎಂದರು.
ಕಳೆದ ವರ್ಷವೂ ಈ ಯೋಜನೆ ಜಾರಿಗೊಳಿಸಲಾಗಿದ್ದು, ಹಾವೇರಿ ಜಿಲ್ಲೆಯ 20ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಕೂಡ ಈ ಸಂಸ್ಥೆಯ ನಿರ್ದೇಶಕರಾಗಿದ್ದು, ಇದು ಅವರ ಕನಸಿನ ಯೋಜನೆಯಾಗಿದೆ. ದಾನಿಗಳು ಈ ಬಡ ವಿದ್ಯಾರ್ಥಿಗಳ ಶೀಕ್ಷಣದ ಶುಲ್ಕ ಭರಿಸಲಿದ್ದಾರೆ. ಆಸಕ್ತರು ಕಾಲೇಜ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ನಟರಾಜ ಅರಳಸುರಳಿ ಇದ್ದರು.