ಹಾವೇರಿ: ಬೇಸಿಗೆ ಸಂದರ್ಭದಲ್ಲಿ ಸೂರ್ಯನ ಶಾಖ ಹೆಚ್ಚಾಗುತ್ತಿದ್ದಂತೆ ಅಗ್ನಿ ಅವಘಡಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 275 ಬೆಂಕಿ ಅನಾಹುತಗಳು ಸಂಭವಿಸಿವೆ. ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹಾನಿಗೀಡಾಗಿದೆ.
ಪ್ರಸಕ್ತ ವರ್ಷದ ಆರಂಭ ಜನವರಿ ತಿಂಗಳಲ್ಲಿ ಜಿಲ್ಲೆಯ ಅಗ್ನಿಶಾಮಕ ಠಾಣೆಗಳಿಗೆ ಒಟ್ಟು 104 ಅಗ್ನಿ ಅವಘಡದ ಕರೆಗಳು ಬಂದಿವೆ. 14.37 ಕೋಟಿ ರೂ. ಮೌಲ್ಯದ ಆಸ್ತಿ ಅಗ್ನಿ ಅನಾಹುತಕ್ಕೆ ಒಳಗಾಗಿದೆ. ಇದರಲ್ಲಿ 74.85 ಲಕ್ಷ ರೂ. ಮೌಲ್ಯದ ಆಸ್ತಿ ನಷ್ಟಕ್ಕೀಡಾಗಿದ್ದು, ಅಗ್ನಿಶಾಮಕ ಠಾಣೆ ಸಿಬ್ಬಂದಿ 13.28 ಕೋಟಿ ರೂ. ಮೌಲ್ಯದ ಆಸ್ತಿಯನ್ನು ರಕ್ಷಿಸಿದ್ದಾರೆ. ಫೆಬ್ರವರಿ ತಿಂಗಳಲ್ಲಿ 171 ಕರೆಗಳು ಬಂದಿದ್ದು, 3.10 ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ 1.36 ಕೋಟಿ ನಷ್ಟ ಉಂಟಾಗಿದ್ದು, 1.74 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಕಳೆದ ವರ್ಷ 2025ರ ಜನವರಿಯಿಂದ ಡಿಸೆಂಬರ್‌ವರೆಗೆ 806 ಫೈರ್ ಕಾಲ್‌ಗಳನ್ನು ಅಗ್ನಿಶಾಮಕ ಸಿಬ್ಬಂದಿ ಹಾಜರು ಮಾಡಿದ್ದಾರೆ. 85 ರಕ್ಷಣಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಅತಿವೃಷ್ಟಿ ಕೇಸ್‌ಗಳು ವರದಿಯಾಗಿಲ್ಲ. ಅಗ್ನಿ ದುರಂತದಲ್ಲಿ ಸಿಲುಕಿದ್ದ 44.15 ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ 8.20 ಕೋಟಿ ರೂ. ಮೌಲ್ಯದ ಆಸ್ತಿ ಹಾನಿಗೀಡಾಗಿದ್ದು, 35.95 ಕೋಟಿ ರೂ. ಮೌಲ್ಯದ ಆಸ್ತಿ ಹಾನಿಗೀಡಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಠಾಣೆ ಅಂಕಿ- ಅಂಶಗಳಿಂದ ಗೊತ್ತಾಗಿದೆ.
2023ರಲ್ಲಿ 13,094, 2024ರಲ್ಲಿ 756 ಫೈರ್ ಕಾಲ್‌ಗಳು ದಾಖಲಾಗಿದ್ದವು. ಮುಂಗಾರು, ಹಿಂಗಾರು ಬೆಳೆಗಳ ಕಟಾವಿನ ಮುಂಚೆ ಬೆಳೆಗಳಿಗೆ ಬೆಂಕಿ ಹೊತ್ತಿಕೊಳ್ಳುವುದು, ಕಟಾವಿನ ನಂತರ ರೈತರು ಸಂಗ್ರಹಿಸುವ ಮೇವಿನ ಬಣವೆಗಳಿಗೆ ಹೆಚ್ಚಿನ ಪ್ರಮಾಣದ ಬೆಂಕಿ ಹೊತ್ತಿಕೊಳ್ಳುತ್ತಿದೆ. ಉಳಿದಂತೆ ಅಂಗಡಿ, ಗೋದಾಮು, ಪಟಾಕಿ ಅಂಗಡಿ, ಕೈಗಾರಿಕೆಗಳು, ಇತರ ಸ್ಥಳಗಳಲ್ಲಿ ಬೆಂಕಿ ಅನಾಹುತಗಳು ಕಾಣಿಸಿಕೊಂಡಿವೆ. ಹೆಚ್ಚಾಗಿ ಶಾರ್ಟ್ ಸರ್ಕ್ಯೂಟ್, ನಿರ್ಲಕ್ಷೃದಿಂದ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿವೆ ಎಂದು ಅಗ್ನಿಶಾಮಕ ಠಾಣೆ ಸಿಬ್ಬಂದಿಯೊಬ್ಬರು ತಿಳಿಸಿದರು.
ಜನವರಿಯಲ್ಲಿ ಐದು ಹಾಗೂ ಫೆಬ್ರವರಿಯಲ್ಲಿ 2 ವಿಶೇಷ ಕರೆಗಳು ಅಗ್ನಿಶಾಮಕ ಠಾಣೆಗಳಿಗೆ ಬಂದಿವೆ. ರಸ್ತೆ ಅಪಘಾತ ಉಂಟಾಗಿ ಪ್ರಯಾಣಿಕರು ವಾಹನದಲ್ಲಿ ಸಿಲುಕಿಕೊಂಡಾಡ, ನದಿ, ಕೆರೆ, ಬಾವಿಯಲ್ಲಿ ಯಾರಾದರೂ ಬಿದ್ದಿದ್ದ ಸಂದರ್ಭಗಳನ್ನು ವಿಶೇಷ ಕರೆಗಳು ಎಂದು ಪರಿಗಣಿಸಲಾಗುತ್ತದೆ.
ಅಗ್ನಿ ಅವಘಡ ಸಂಭವಿಸುವ ಮುನ್ನವೇ ಸಾರ್ವಜನಿಕರು ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಅದರಲ್ಲೂ ವಿದ್ಯುತ್ ಬಳಕೆ ಕುರಿತು ಜಾಗರೂಕರಾಗಿರಬೇಕು. ಗುಣಮಟ್ಟದ ವೈರ್, ಸ್ವಿಚ್ ಬೋರ್ಡ್ ಅಳವಡಿಕೆ, ಕಾಲ ಕಾಲಕ್ಕೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ರೈತರು ಹೊಲದಲ್ಲಿ ಮೋಟಾರ್, ಟಿಸಿ, ವಿದ್ಯುತ್ ಲೈನ್ ಬಳಸುವಾಗ ಸುರಕ್ಷತೆ ವಹಿಸಬೇಕು. ಬೇಸಿಗೆಯಲ್ಲಿ ಹೊಲದಲ್ಲಿನ ಬೆಳೆ, ಹುಲ್ಲು, ಬಣವೆ, ಹುಲ್ಲು ಸಂಗ್ರಹಿಸಿದ ಜಾಗ, ಪಟಾಕಿ ಅಂಗಡಿ, ಮತ್ತಿತರ ಸೂಕ್ಷ್ಮ ವಸ್ತುಗಳ ಮಾರಾಟ, ಗೋದಾಮುಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ, ಸುರಕ್ಷತಾ ಸಾಮಗ್ರಿಗಳನ್ನು ಸಂಗ್ರಹಿಸಿ ಇಡಬೇಕು. ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸದಂತೆ ಜಾಗ್ರತೆ ವಹಿಸಬೇಕು ಎಂಬುದು ‘ವಿಜಯವಾಣಿ’ ಕಳಕಳಿ.
ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದಲ್ಲಿ 2023ರಲ್ಲಿ ಸಂಭವಿಸಿದ ಪಟಾಕಿ ಅಂಗಡಿ ದುರಂತದಲ್ಲಿ ನಾಲ್ವರು ಕಾರ್ಮಿಕರು ಧಾರುಣವಾಗಿ ಮೃತಪಟ್ಟರು. ಪ್ರವಾಹದ ವೇಳೆ ಕುಣಿಮೆಳ್ಳಿಹಳ್ಳಿ ಬಳಿ ಕೆರೆ ಪ್ರವಾಹದಲ್ಲಿ ಸಿಲುಕಿದ್ದ 28 ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದರು. ಇತ್ತೀಚೆಗೆ ಹಾವೇರಿ ಬಸ್ ನಿಲ್ದಾಣದ ನೆಗಳೂರು ಫರ್ನಿಚರ್ ಮಳಿಗೆಗೆ ಬೆಂಕಿ ಹೊತ್ತಿಕೊಂಡು ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿತ್ತು. ಇಂತಹ ದುರಂತಗಳು ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಪಾಠವಾಗಬೇಕು. ಮತ್ತೆ ಮರುಕಳಿಸದಂತೆ ಎಲ್ಲರೂ ಜಾಗರೂಕತೆ ವಹಿಸಬೇಕಿದೆ.
ಬೇಸಿಗೆಯಲ್ಲಿ ಅಗ್ನಿ ಅನಾಹುತಗಳು ಹೆಚ್ಚಾಗಿರುತ್ತವೆ. ಮಾ.9ರಂದು ಒಂದೇ ದಿನ ಹಾವೇರಿ ತಾಲೂಕಿನಲ್ಲಿ 9 ಫೈರ್ ಕಾಲ್ ಸೇರಿ ಜಿಲ್ಲೆಯಲ್ಲಿ 30 ಕರೆಗಳು ದಾಖಲಾಗಿದ್ದವು. ಸಾರ್ವಜನಿಕರು ಮುಂಜಾಗ್ರತೆ ವಹಿಸಿದರೆ ಅನೇಕ ಅಗ್ನಿ ಅವಘಡಗಳನ್ನು ತಪ್ಪಿಸಬಹುದು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ಮಾಡದೇ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಆದರೂ ಅಗ್ನಿ ಅವಘಡ ಸಂಭವಿಸಿದರೆ ನಿಮ್ಮ ರಕ್ಷಣಾ ಕಾರ್ಯಕ್ಕೆ ನಮ್ಮ ತಂಡಗಳು ಸಜ್ಜಾಗಿರುತ್ತವೆ. ಜತೆಗೆ ಅಗ್ನಿ ಅವಘಡ, ಅಪಘಾತದ ಸಂದರ್ಭದಲ್ಲಿ ಸಿಬ್ಬಂದಿ ಕಾರ್ಯಾಚರಣೆಗೆ ಸಾರ್ವಜನಿಕರು ಸಹಕರಿಸಬೇಕು.