Haveri, State Govt, Employees, Association,  
ಹಾವೇರಿ

ಸಿಎಂ, ಡಿಸಿಎಂ ಸನ್ಮಾನ ಸಮಾರಂಭ ಜು.11ರಂದು; ಜಿಲ್ಲೆಯಿಂದ 500 ರಾಜ್ಯ ಸರ್ಕಾರಿ ನೌಕರರು ಭಾಗಿ

ಹಾವೇರಿ: ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಜು.11ರಂದು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿರುವ ನಮ್ಮಾಭಿಮಾನದ ಅಭಿನಂದನೆ ಸಮಾರಂಭಕ್ಕೆ ಜಿಲ್ಲೆಯಿಂದ ಸುಮಾರು 500 ನೌಕರರು ಭಾಗವಹಿಸಲಿದ್ದಾರೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಜು.11ರಂದು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಗುವುದು. ಜತೆಗೆ ಬಹುದಿನದ ಬೇಡಿಕೆಯಾಗಿರುವ ಓಪಿಎಸ್ ಜಾರಿ ಮತ್ತು ಕೇಂದ್ರ ಮಾದರಿ ವೇತನ ಜಾರಿಗೆ ಹಕ್ಕೋತ್ತಾಯದ ಮನವಿಯನ್ನು ಸಲ್ಲಿಸಲಾಗುತ್ತದೆ.
ಈ ಸಮಾರಂಭದಲ್ಲಿ ಆದಿಚುಂಚುನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲೆಯಿಂದಲೂ ಸುಮಾರು 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಲಿದ್ದಾರೆ ಎಂದು ಮಲ್ಲೇಶ ಕರಿಗಾರ ತಿಳಿಸಿದ್ದಾರೆ.