haveri, sslc, exams 
ಹಾವೇರಿ

ಎಸ್‌ಎಸ್‌ಎಲ್‌ಸಿ ಮೊದಲ ಪರೀಕ್ಷೆ ಸುಗಮ; ವಿದ್ಯಾರ್ಥಿಗಳಿಗೆ ಹೂವು, ಚಾಕೊಲೇಟ್ ಕೊಟ್ಟು ಶುಭ ಕೋರಿದ ಡಿಡಿಪಿಐ ತಂಡ; 256 ಅಭ್ಯರ್ಥಿಗಳು ಗೈರು

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಜಿಲ್ಲೆಯ 81 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆದಿದೆ. ಅಧಿಕಾರಿಗಳು, ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂವು, ಚಾಕೊಲೇಟ್ ಕೊಟ್ಟು ಶುಭ ಹಾರೈಸಿದರು.
ಪರೀಕ್ಷೆಗೆ 22,469 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 22,213 ವಿದ್ಯಾರ್ಥಿಗಳು ಹಾಜರಾಗಿದ್ದು, 256 ಅಭ್ಯರ್ಥಿಗಳು ಗೈರಾಗಿದ್ದರು. ಶಿಗ್ಗಾಂವಿ ತಾಲೂಕು ತಡಸ ಗ್ರಾಮದ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಜಿಲ್ಲೆಯ ವಿವಿಧ ಕೇಂದ್ರಗಳಿಗೆ ಹಾಗೂ ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ, ಡಿಡಿಪಿಐ ಮೋಹನ ದಂಡಿನ, ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹಾವೇರಿಯ 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು, ಶಿಕ್ಷಕರು ಗುಲಾಬಿ ಹೂವು, ಚಾಕೊಲೇಟ್ ಕೊಟ್ಟು ಸ್ವಾಗತಿಸಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ಹಾಗೂ ಚಾಕೊಲೇಟ್ ನೀಡುವ ಮೂಲಕ ಸ್ವಾಗತಿಸಿದರು. ಉಪನಿರ್ದೇಶಕ (ಅಭಿವೃದ್ಧಿ) ಝಡ್.ಎಂ.ಖಾಜಿ, ತಹಸೀಲ್ದಾರ್ ಶರಣಮ್ಮ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಇತರರಿದ್ದರು.
ಜಿಪಂನಲ್ಲಿ ವೆಬ್ ಕಾಸ್ಟಿಂಗ್
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಎಲ್ಲ ಕೇಂದ್ರಗಳಿಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಈ ಕ್ಯಾಮರಾಗಳ ವೀಕ್ಷಣೆಗೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗಿದೆ. ಪ್ರತಿ 6 ಸೆಂಟರ್‌ಗಳಿಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ನಕಲು ಪ್ರಕರಣ ಕಂಡುಬಂದಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು. ಎಲ್ಲೆಡೆ ಪರೀಕ್ಷೆ ಶಾಂತಿಯುತವಾಗಿ ನಡೆದಿದೆ ಎಂದು ಡಿಡಿಪಿಐ ಮೋಹನ ದಂಡಿನ ತಿಳಿಸಿದರು.