Haveri, Sports Dept, District Ground, Synthetic Track,  
ಹಾವೇರಿ

10 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣ; ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲು ಸಿದ್ಧತೆ; ಲೋಕೋಪಯೋಗಿ ಇಲಾಖೆಗೆ ಜವಾಬ್ದಾರಿ ನೀಡಿದ ಕ್ರೀಡಾ ಇಲಾಖೆ

ಹಾವೇರಿ: ಎರಡು ದಶಕಗಳ ಬೇಡಿಕೆಯಾಗಿದ್ದ ಸಿಂಥೆಟಿಕ್ ಟ್ರಾೃಕ್ ನಿರ್ಮಾಣ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಇದಕ್ಕಾಗಿ 10 ಕೋಟಿ ರೂ. ಕಾಂಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದು ಜಿಲ್ಲೆಯ ಕ್ರೀಡಾಪಟುಗಳ ಮೊಗದಲ್ಲಿ ಸಂತಸ ಮೂಡಿಸಲಿದೆ. 
 ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಿಂಥೆಟಿಕ್ ಟ್ರಾೃಕ್ ನಿರ್ಮಿಸುವ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ (ಪಿಡಬ್ಲೂೃಡಿ)ಹೆಗಲಿಗೆ ವಹಿಸಿ, 10 ಕೋಟಿ ರೂ. ಮಂಜೂರು ಮಾಡಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಿದ್ದಾರೆ. 
 ನಗರದ ಮಧ್ಯ ಭಾಗದ ಮುನ್ಸಿಪಲ್ ಹೈಸ್ಕೂಲ್ ಪಕ್ಕದಲ್ಲಿರುವ 9 ಎಕರೆ 13 ಗುಂಟೆ ವ್ಯಾಪ್ತಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣವಾಗಲಿದೆ. ಈಗಿರುವ ಜಿಲ್ಲಾ ಕ್ರೀಡಾಂಗಣದಲ್ಲೇ 400 ಮೀಟರ್ ಉದ್ದದ ಸಿಂಥೆಟಿಕ್ ಟ್ರಾೃಕ್ ನಿರ್ಮಿಸಲು ಲೋಕೋಪಯೋಗಿ ಸಿದ್ಧತೆ ನಡೆಸಿದೆ. 
 ಪಿಡಬ್ಲೂೃಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಮಂತ ಹದಗಲ್ ನೇತೃತ್ವದ ತಂಡ ತಯಾರಿಸಿರುವ ಡಿಪಿಆರ್‌ನಲ್ಲಿ 400 ಮೀಟರ್ ಉದ್ದನೆಯ ಸಿಂಥೆಟಿಕ್ ಟ್ರಾೃಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಅದರಲ್ಲಿ ಎಂಟು ಲೇನ್‌ಗಳು ಬರಲಿವೆ. ಟ್ರಾೃಕ್ ಚೈನ್ ಲಿಂಕ್ ಫೆನ್ಸಿಂಗ್ ಇರಲಿದೆ. ಮೈದಾನದ ಮಧ್ಯದಲ್ಲಿ ಲಾನ್ ನಿರ್ಮಿಸಲಾಗುವುದು. ಅದರಲ್ಲಿ ಲಾಂಗ್ ಜಂಪ್, ವಾಟರ್ ಜಂಪ್ ಕೋಟ್, ಶಾಟ್‌ಫುಟ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ ಕ್ರೀಡೆಗಳ ಕೋಟ್‌ಗಳನ್ನು ನಿರ್ಮಿಸಲು ತಯಾರಿ ನಡೆಸಲಾಗುತ್ತಿದೆ.
ಸರ್ಕಾರ ಗಮನ ಸೆಳೆದ ವರದಿ 
 ಕೆಸರು ತುಂಬಿದ ಮೈದಾನದಲ್ಲೇ ಓಡುತ್ತ, ಆಟವಾಡುತ್ತ, ಜಾರಿ ಬಿದ್ದು ಗಾಯಗೊಳ್ಳುತ್ತಿದ್ದ ಕ್ರೀಡಾಪಟುಗಳ ಸಮಸ್ಯೆಗಳ ಕುರಿತು ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಇತ್ತೀಚೆಗೆ ಸರಣಿ ವರದಿಗಳ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಅವರು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಬೆಳಕು ಚೆಲ್ಲಿತ್ತು. ವಿ.ವಾ. ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಜಿಲ್ಲೆಯ ಕ್ರೀಡಾಪಟುಗಳ ಸಮಸ್ಯೆಗಳಿಗೆ ಕೊನೆಗೂ ಕಿವಿಗೊಟ್ಟಿದೆ. ಆದಷ್ಟು ಬೇಗ ಸಿಂಥೆಟಿಕ್ ಟ್ರಾೃಕ್ ನಿರ್ಮಾಣವಾಗಲಿ, ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ. ಯಾಲಕ್ಕಿ ನಾಡಿನ ಕಂಪನ್ನು ಎಲ್ಲೆಡೆ ಸೂಸಲಿ ಎಂಬುದು ‘ವಿಜಯವಾಣಿ’ ಆಶಯವಾಗಿದೆ. 
ಮೂಲ ಸೌಲಭ್ಯ ಕಲ್ಪಿಸಿ 
 ಸಿಂಥೆಟಿಕ್ ಟ್ರಾೃಕ್ ಜತೆಗೆ ಮೈದಾನದಲ್ಲಿ ಮಹಿಳೆಯರು, ಪರುಷರು ಹಾಗೂ ಅಂಗವಿಕಲರಿಗೆ ಪ್ರತ್ಯೇಕವಾದ ಶೌಚಗೃಹಗಳನ್ನು ನಿರ್ಮಿಸಬೇಕು. ಶುದ್ಧ ಕುಡಿಯುವ ನೀರು, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಭದ್ರತಾ ಸೌಕರ್ಯ, ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಿದೆ. 
 ಏನಿದರ ವಿಶೇಷ ? 
 ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಗಳು ಸಿಂಥೆಟಿಕ್ ಟ್ರಾೃಕ್ ಮೇಲೆ ನಡೆಯುತ್ತವೆ. ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಮಣ್ಣಿ ನ ಮೈದಾನದಲ್ಲಿ ಅಭ್ಯಾಸ ಮಾಡಿ ಬಂದು ನೇರವಾಗಿ ಸಿಂಥೆಟಿಕ್ ಟ್ರಾೃಕ್ ಮೇಲೆ ಸ್ಪರ್ಧೆಗೆ ನಿಂತರೆ ಸೋಲು ಕಾಣುತ್ತಾರೆ. ಹಾಗಾಗಿ, ಪ್ರತಿ ಜಿಲ್ಲೆಯಲ್ಲೂ ಸಿಂಥೆಟಿಕ್ ಟ್ರಾೃಕ್ ಮಾಡಬೇಕು ಎಂದು ರಾಜ್ಯ ಸರ್ಕಾರ ಯೋಜಿಸಿತ್ತು.  ಹಾವೇರಿ ಜಿಲ್ಲೆಗೆ ಈ ಭಾಗ್ಯ ತಡವಾಗಿ ಒದಗಿಬಂದಿದೆ.
"

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು.

— ಶ್ರೀಮಂತ ಹದಗಲ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ

 

"

ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾೃಕ್ ನಿರ್ಮಿಸಲು ರಾಜ್ಯ ಸರ್ಕಾರ 10 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ. ಟ್ರಾೃಕ್ ನಿರ್ಮಾಣ ಕಾಮಗಾರಿ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ.

— ಲತಾ ಬಿ.ಎಚ್., ಸಹಾಯಕ ನಿರ್ದೇಶಕಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ

 

ಗ್ರೌಂಡ್ ವಿಶೇಷತೆ ಏನು ?  
 * 400 ಮೀಟರ್ ಟ್ರಾೃಕ್ ನಿರ್ಮಾಣ   
 * ಚೈನ್ ಲಿಂಕ್ ಫೆನ್ಸಿಂಗ್    
 * ಮೈದಾನದ ಮಧ್ಯದಲ್ಲಿ ಲಾನ್    
 * ಲಾಂಗ್ ಜಂಪ್, ವಾಟರ್ ಜಂಪ್ ಕೋಟ್   
 * ಶಾಟ್‌ಪುಟ್, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ ಮೈದಾನ ನಿರ್ಮಾಣ