Haveri, SP, Traffice, AI Camera,
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯ ಪ್ರಮುಖ ವೃತ್ತಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ (ಎಐ) ಉಳ್ಳ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಾಹನದ ನೋಂದಣಿ ಸಂಖ್ಯೆ ಆಧರಿಸಿ, ಅವರ ಮನೆಗಳಿಗೇ ದಂಡದ ರಸೀದಿ ರವಾನಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಚಾರ ನಿಯಮ ಉಲ್ಲಂಘನೆ ತಡೆಗಾಗಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ‘ಹದ್ದಿನ ಕಣ್ಣು’ ಯೋಜನೆಯಡಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜಮೆಂಟ್ ಸಿಸ್ಟೆಂ (ಐಟಿಎಂಎಸ್) ಪರಿಚಯಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಪ್ರಸಕ್ತ ಸಾಲಿನ ಸಂಚಾರ ಮತ್ತು ರಸ್ತೆ ಸುರಕ್ಷತಾ ಯೋಜನೆ ಅಡಿಯಲ್ಲಿ 52,63,150 ರೂ. ವೆಚ್ಚದಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ 8 ಎಐ ಕ್ಯಾಮರಾ, 10 ಆಧುನಿಕ ತಂತ್ರಜ್ಞಾನವುಳ್ಳ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮೊದ ಹಂತದಲ್ಲಿ ನಗರದ ಹೊಸಮನಿ ಸಿದ್ದಪ್ಪ ವೃತ್ತ, ಗುತ್ತಲ ವೃತ್ತ, ಕಾಗಿನೆಲೆ ವೃತ್ತದಲ್ಲಿ 41 ಲಕ್ಷ ರೂ. ವೆಚ್ಚದಲ್ಲಿ ಕ್ಯಾಮರಾ ಅಳವಡಿಸಲಾಗಿದೆ. 2ನೇ ಹಂತದಲ್ಲಿ 11,62,150 ರೂ. ವೆಚ್ಚದಲ್ಲಿ ಚನ್ನಮ್ಮ ವೃತ್ತ, ವಾಲ್ಮೀಕಿ ವೃತ್ತದಲ್ಲಿ ಕ್ಯಾಮರಾಗಳನ್ನು ಅಳವಡಿಸಲು ಈಗಾಗಲೇ ಟೆಂಡರ್ ಒರೆಯಲಾಗಿದೆ ಎಂದರು.
ನಗರದಲ್ಲಿ ಅಳವಡಿಸಿರುವ ಕ್ಯಾಮರಾಗಳನ್ನು ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಮೂಲಕ ಎಸ್‌ಪಿ ಕಚರಿಯಲ್ಲಿರುವ ಕಮಾಮಡ್ ಮತ್ತು ಕಂಟ್ರೋಲ್ ಸೆಂಟರ್‌ಗೆ ಸಂಪರ್ಕಿಸಲಾಗಿದೆ. ಇಲ್ಲಿ ತರಬೇತಿ ಹೊಂದಿದ ಸಿಬ್ಬಂದಿ 24/7 ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್ ಪ್ಲೇಟ್ ಆಧರಿಸಿ, ವಾಹನದ ಮಾಲೀಕರ ಮನೆಯ ವಿಳಾಸಕ್ಕೆ ನೇರವಾಗಿ ದಂಡ ಪಾವತಿಯ ಇ-ಚಲನ್ ರವಾನಿಸುತ್ತಾರೆ ಎಂದು ವಿವರಿಸಿದರು.
ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ, ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸುವುದು, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಿದರೆ ಎಐ ಕ್ಯಾಮರಾ ಮೂಲಕ ಇ-ಚಲನ್‌ಗಳನ್ನು ನೇರವಾಗಿ ಮನೆಗೆ ದಂಡದ ರಸೀದಿ ಕಳುಹಿಸಲಾಗುವುದು. ನಂತರ ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಆನ್‌ಲೈನ್ ಮೂಲಕ ದಂಡ ಪಾವತಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್‌ಪಿಗಳಾದ ಗುರುಶಾಂತಪ್ಪ, ಗಿರಿಮಲ್ಲ ತಳಕಟ್ಟಿ, ಸಮಿವುಲ್ಲಾ ಕೆ., ಎಂ.ಎನ್.ಹನಕನಹಳ್ಳಿ, ಸಂಚಾರ ಠಾಣೆ ಪಿಎಸ್‌ಐ ಶೈಲಶ್ರೀ, ಇತರರಿದ್ದರು.
ಜು.27ರಿಂದ ಮನೆಗೇ ಬರುತ್ತೆ ರಸೀದಿ
ಎಐ ಕ್ಯಾಮರಾ ಆಧರಿಸಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ದಂಡ ವಿಧಿಸುವ ಕಾರ್ಯದ ಪ್ರಾಯೋಗಿಕ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇಂದಿನಿಂದ ಹಾವೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈ ಕುರಿತು ಜಾಗೃತಿ ಮೂಡಿಸಲಾಗುವುದು. ಜು.27ರಿಂದ ಇ-ಚಲನ್ ದಂಡ ವಿಧಿಸುವ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಯಶೋಧಾ ವಂಟಗೋಡಿ ತಿಳಿಸಿದರು.
ವಾಣಿಜ್ಯ ನಗರಿ ರಾಣೆಬೆನ್ನೂರು ನಗರದಲ್ಲಿ ಎಐ ಕ್ಯಾಮರಾ ಅಳವಡಿಕೆಗಾಗಿ ರಾಣೆಬೆನ್ನೂರು ನಗರಸಭೆ ವತಿಯಿಂದ 1 ಕೋಟಿ ರೂ. ಬಜೆಟ್ ಕಾಯ್ದಿರಿಸಲಾಗಿದೆ. ಶೀಘ್ರದಲ್ಲೇ ಅಲ್ಲೂ ಎಐ ಕ್ಯಾಮರಾ ಅಳವಡಿಸಲಾಗುವುದು. ಹಾವೇರಿ ನಗರಸಭೆಯಿಂದಲೂ ಯೋಜನೆಗೆ ಹಣ ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ. ನಂತರ ಹಂತ ಹಂತವಾಗಿ ಜಿಲ್ಲೆಯಾದ್ಯಂತ ಯೋಜನೆ ಜಾರಿಗೊಳಿಸಲಾಗುವುದು ಎಂದು ಎಸ್‌ಪಿ ಯಶೋಧಾ ತಿಳಿಸಿದರು.
ಹಾವೇರಿ ಜಿಲ್ಲೆಯಲ್ಲಿ ಶೇ.95ಕ್ಕಿಂತ ಹೆಚ್ಚಿನ ಅಪಘಾತಗಳು ತಲೆಗೆ ಪೆಟ್ಟು ಬಿದ್ದು ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಹೆಲ್ಮೆಟ್ ಬಳಕೆ ಕಡ್ಡಾಯ, ಸೀಟ್ ಬೆಲ್ಟ್ ಧರಿಸುವುದು, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುವುದು, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುವುದು ಮಾಡಿದರೆ ಆಟೋಮೆಟಿಕ್ ಆಗಿ ದಂಡದ ರಸೀದಿ ಮನೆಗೆ ಬರಲಿದೆ. ಈ ಯೋಜನೆಯಿಂದ ಸಂಚಾರ ನಿಯಮ ಉಲ್ಲಂಘನೆ ತಡೆಯುವುದು ಸೇರಿದಂತೆ ಕಳ್ಳತನ ತಡೆಗಟ್ಟುವುದು, ಅಪರಾಧಿಗಳ ಪತ್ತೆಗೆ ಸಹಕಾರಿಯಾಗಲಿದೆ ಎಂದರು ಎಸ್‌ಪಿ ಯಶೋಧಾ ವಂಟಗೋಡಿ.