Haveri, SP, Traffic Police, Bike, Defective, Silencer, JCB, Demolished, 
ಹಾವೇರಿ

ಕರ್ಕಶ ಶಬ್ದ ಸೂಸುವ ಸೈಲೆನ್ಸರ್ ನಾಶ; 40 ಮಾಡಿಫೈಡ್ ಸೈಲೆನ್ಸರ್ ಮೇಲೆ ಜೆಸಿಬಿ ಹತ್ತಿಸಿದ ಪೊಲೀಸರು; ಹಾವೇರಿ ಖಾಕಿ ಪಡೆಯ ವಿನೂತನ ಪ್ರಯೋಗ

ಹಾವೇರಿ: ಶಬ್ದ ಮಾಲಿನ್ಯ ಉಂಟು ಮಾಡುವ ಹಾಗೂ ಕರ್ಕಶ ಧ್ವನಿ ಹೊರಸೂಸುವ ದ್ವಿಚಕ್ರ ವಾಹನಗಳ ದೋಷಪೂರಿತ ಸೈಲೆನ್ಸರ್ ಜಪ್ತಿ ಕಾರ್ಯಾಚರಣೆ ಆರಂಭಿಸಿದ್ದ ಹಾವೇರಿ ಸಂಚಾರ ಪೊಲೀಸರು ನಗರದಲ್ಲಿ ಬುಧವಾರ 40ಕ್ಕೂ ಅಧಿಕ ಮಾಡಿಫೈಡ್ ಸೈಲೆನ್ಸರ್‌ಗಳನ್ನು ಜೆಸಿಬಿ ಮೂಲಕ ನಾಶಪಡಿಸಿದರು. ಈ ವಿನೂತನ ಪ್ರಯೋಗದ ಮೂಲಕ ಯುವ ಬೈಕ್ ಸವಾರರಿಗೆ ಖಾಕಿ ಪಡೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ನಗರದ ಹಳೆಯ ಪಿಬಿ ರಸ್ತೆಯ ಜಿಲ್ಲಾ ಪೊಲೀಸ್ ಕಚೇರಿ ಎದುರು ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸಮ್ಮುಖದಲ್ಲಿ ರಸ್ತೆ ಮೇಲೆ ಸೈಲೆನ್ಸರ್‌ಗಳನ್ನು ಜೆಸಿಬಿ ಮೂಲಕ ನಾಶಪಡಿಸಲಾಯಿತು. 40 ಸೈಲೆನ್ಸರ್‌ಗಳನ್ನು ರಸ್ತೆ ಮೇಲೆ ಸಾಲಾಗಿ ಇಡಲಾಗಿತ್ತು. ಜೆಸಿಬಿ ಯಂತ್ರ ಒಂದೊಂದೇ ಸೈಲೆನ್ಸರ್‌ಗಳ ಮೇಲೆ ಹತ್ತಿ ನಾಶಪಡಿಸಿತು. ಈ ವೇಳೆ ಒಂದು ಬದಿಯ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ವಾಹನ ಸವಾರರು, ಯುವಕರು, ಸಾರ್ವಜನಿಕರು ಸೈಲೆನ್ಸರ್ ನಾಶಪಡಿಸುವ ಪ್ರಕ್ರಿಯೆಯನ್ನು ಆಸ್ಚರ್ಯದಿಂದ ವೀಕ್ಷಿಸಿದರು. ಈ ಕಾರ್ಯಾಚರಣೆಯ ಮೂಲಕ ವಿವಿಧ ಬೈಕ್ ಕಂಪನಿಗಳಿಂದ ಫಿಟ್ಟಿಂಗ್ ಮಾಡಿರುವ ಕಂಪನಿಯ ಸೈಲೆನ್ಸರ್ ಬದಲಾವಣೆ (ಆಲ್ಟರೇಶನ್) ಮಾಡಿ ಕರ್ಕಶ ಶಬ್ದ ಹೊರಸೂಸುವ ದೋಷಪೂರಿತ ಸೈಲೆನ್ಸರ್ ಅಳವಡಿಸುವ ಯುವಕರಿಗೆ ಪೊಲೀಸರು ಖಡಕ್ ಸಂದೇಶ ರವಾನಿಸಿದರು. ಕಾರ್ಯಾಚರಣೆ ಬಳಿ ಎಸ್‌ಪಿ ಯಶೋಧಾ ವಂಟಗೋಡಿ ಮಾತನಾಡಿ, ದ್ವಿಚಕ್ರ ವಾಹನಗಳಿಗೆ ಕೆಲವರು ಕರ್ಕಶ ಶಬ್ದದ ಸೈಲೆನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಶಾಲಾ- ಕಾಲೇಜ್, ಆಸ್ಪತ್ರೆ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದಾರೆ. ಇಂತಹ ವಾಹನ ಸವಾರರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಎಎಸ್‌ಪಿ ಎಲ್.ವೈ.ಶಿರಕೋಳ, ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ, ಹಾವೇರಿ ಸಂಚಾರ ಠಾಣೆ ಪಿಎಸ್‌ಐ ಶೈಲಶ್ರೀ, ಪೊಲೀಸ್ ಇಲಾಖೆ, ಸಂಚಾರ ಠಾಣೆ ಅಧಿಕಾರಿಗಳು, ಸಿಬ್ಬಂದಿ, ಇತರರಿದ್ದರು.
ಕೋಟ್:
ಸಾರ್ವಜನಿಕರ ನೆಮ್ಮದಿ ಹಾಗೂ ಸುಗಮ ಸಂಚಾರ ಗಮನದಲ್ಲಿ ಇಟ್ಟುಕೊಂಡು ಶಬ್ದಮಾಲಿನ್ಯ ಉಂಟು ಮಾಡುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುವುದು. ವಾಹನಗಳ ಕಂಪನಿಗಳಿಂದ ಅಳವಡಿಸಿರುವ ಸೈಲನ್ಸರ್ ಬದಲಾವಣೆ ಮಾಡಿ, ಕರ್ಕಶ ಶಬ್ದ ಹೊರಸೂಸುವ ಸೈಲೆನ್ಸರ್ ಅಳವಡಿಸಿದವರ ಸೈಲೆನ್ಸರ್ ಜಪ್ತಿ ಮಾಡುವ ಕಾರ್ಯಾಚರಣೆ ಮುಂದುವರಿಸಲಾಗುವುದು.
ಯಶೋಧಾ ವಂಟಗೋಡಿ, ಎಸ್‌ಪಿ