ipl t20, cricket, betting,
ಹಾವೇರಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಕ್ರಿಕೆಟ್ ಪಂದ್ಯಗಳು ಮಾ.28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಧಿಕೃತವಾಗಿ ಆರಂಭವಾಗಲಿದೆ. ಐಪಿಎಲ್ ಟಿ20 ಟೂರ್ನಿ ಪ್ರೇಕ್ಷಕರಿಗೆ ಮನರಂಜನೆಯ ಹಬ್ಬವಾದರೆ, ದಂಧೆಕೋರರಿಗೆ ಪ್ರತಿ ವರ್ಷ ಬೆಟ್ಟಿಂಗ್ ಹಬ್ಬದಂತೆ ಪರಿಣಮಿಸುತ್ತಿದೆ. ಬೆಟ್ಟಿಂಗ್ ದಂಧೆಕೋರರು ಕೋಟಿ ಕೋಟಿ ರೂ. ಲೂಟಿ ಹೊಡೆಯಲು ಬಗೆ ಬಗೆಯ ಅವತಾರಗಳಲ್ಲಿ ಜನರನ್ನು ಆಕರ್ಷಿಸಲು ಸಜ್ಜಾಗುತ್ತಿದ್ದಾರೆ.
ಮಾ.28ರಂದು ಮೊದಲ ದಿನ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ. ಮೇ 30ರವರೆಗೆ ಎರಡು ತಿಂಗಳು ನಡೆಯುವ ಐಪಿಎಲ್‌ನಲ್ಲಿ ದಂಧೆಕೋರರು ಬೆಟ್ಟಿಂಗ್ ನೆಪದಲ್ಲಿ ಮುಗ್ದ ಜನರಿಂದ ನೂರಾರು ಕೋಟಿ ಕೊಳ್ಳೆ ಹೊಡೆಯಲು ಹೊಂಚು ಹಾಕಿದ್ದಾರೆ.
ಕೋಟ್ಯಂತರ ಅಭಿಮಾನಿಗಳ ಹಬ್ಬ ಐಪಿಎಲ್ ಪಂದ್ಯಗಳು ಶುರುವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಬೆಟ್ಟಿಂಗ್ ಕುಳಗಳು ಮತ್ತೆ ಅಬ್ಬರಿಸಲು ಸಜ್ಜಾಗಿದ್ದಾರೆ. ಬೆಟ್ಟಿಂಗ್ ಮೂಲಕ ಕೋಟ್ಯಂತರ ರೂ. ವ್ಯವಹಾರ ನಡೆಸುವ ಉತ್ಸಾಹದಲ್ಲಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಬೆಟ್ಟಿಂಗ್ ಜಾಲಕ್ಕೆ ಅಮಾಯಕ, ಮುಗ್ದ ಯುವಕರನ್ನು ಬೀಳಿಸಲು ಸಜ್ಜಾಗಿದ್ದು, ದಿನದಿಂದ ದಿನಕ್ಕೆ ಜಾಲ ವಿಸ್ತರಿಸುವ ಸಾಧ್ಯತೆ ದಟ್ಟವಾಗಿದೆ. ಬೆಟ್ಟಿಂಗ್‌ಗಾಗಿಯೇ ಸೃಷ್ಟಿಸಲಾಗಿರುವ ತರಹೇವಾರಿ ಆ್ಯಪ್‌ಗಳು ದಂಧೆಕೋರರಿಗೆ ಸಹಕಾರಿಯಾಗಿವೆ. ಈ ಆ್ಯಪ್‌ಗಳ ಮೂಲಕ ಬೆಟ್ಟಿಂಗ್ ಆಡುವವರನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಟಿವಿ, ಮೊಬೈಲ್ ಮೂಲಕ ಬೆಟ್ಟಿಂಗ್ ಆಡುವಾಗ ನೇರವಾದ ಸಾಕ್ಷ್ಯಗಳು ಲಭ್ಯವಾಗುತ್ತವೆ. ಆದರೆ, ಆ್ಯಪ್ ಮೂಲಕ ಆಡಿದರೆ ಸಾಕ್ಷಿ ಸಂಗ್ರಹ ಕಷ್ಟಕರ ಎನ್ನುತ್ತಾರೆ ಪೊಲೀಸರು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪೊಲೀಸ್ ಪಡೆ ಬೆಟ್ಟಿಂಗ್ ದಂಧೆಕೋರರ ಹೆಡೆಮುರಿ ಕಟ್ಟಬೇಕೆಂಬ ಆಗ್ರಹ ಜನರಿಂದ ಕೇಳಿಬಂದಿದೆ.
ಲೈವ್‌ನಲ್ಲಿ 17 ಸೆಕೆಂಡ್ ವ್ಯತ್ಯಾಸ
ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನೇರಪ್ರಸಾರ (ಲೈವ್) ಟಿವಿ ಮೂಲಕ ಪ್ರಸಾರವಾಗುತ್ತದೆ. ಮೈದಾನದಲ್ಲಿ ನಡೆಯುವ ಪಂದ್ಯದ ದೃಶ್ಯ ಸುಮಾರು 17 ಸೆಕೆಂಡ್‌ಗಳ ನಂತರ ಟಿವಿಯಲ್ಲಿ ಪ್ರಸಾರವಾಗುತ್ತದೆ. ಈ ವ್ಯತ್ಯಾಸವನ್ನೇ ಬಂಡವಾಳ ಮಾಡಿಕೊಳ್ಳುವ ದಂಧೆಕೋರರು ಬಾಲ್ ಹಾಗೂ ರನ್‌ಗಳ ಆಧಾರದಲ್ಲಿಯೂ ಬೆಟ್ಟಿಂಗ್ ಕಟ್ಟಿಸಿಕೊಂಡು ದುಡ್ಡು ಮಾಡುತ್ತಾರೆ.
ಕಿಂಗ್‌ಪಿನ್‌ಗಳ ಹೆಡೆಮುರಿ ಕಟ್ಟಿ
ಜಿಲ್ಲೆಯಲ್ಲಿ ರಾಣೆಬೆನ್ನೂರ ಬೆಟ್ಟಿಂಗ್ ಹಬ್ ಎಂಬಂತಾಗಿದೆ. ಉಳಿದಂತೆ ಹಾವೇರಿ, ಹಿರೇಕೆರೂರ, ರಟ್ಟಿಹಳ್ಳಿ, ಬ್ಯಾಡಗಿ, ಶಿಗ್ಗಾಂವಿ, ಸವಣೂರ, ಹಾನಗಲ್ಲ ತಾಲೂಕುಗಳ ಸಾವಿರಾರು ಜನರೂ ಬೆಟ್ಟಿಂಗ್ ಬಲೆಯಲ್ಲಿ ಸಿಲುಕಿ ಬೀದಿ ಪಾಲಾಗುತ್ತಿವೆ. ಇದನ್ನು ತಡೆಗಟ್ಟಲು ಪೊಲೀಸರು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಹೊಸ ಹೊಸ ರೂಪದಲ್ಲಿ ಬೆಟ್ಟಿಂಗ್ ದಂಧೆಕೋರರು ಸದಾ ಸಕ್ರಿಯರಾಗಿ ಇರುತ್ತಾರೆ. ಇದಕ್ಕೆ ಕೆಲ ಪೊಲೀಸ್ ಅಧಿಕಾರಿಗಳೂ ಸಾಥ್ ನೀಡುತ್ತಾರೆ ಎಂಬ ಆರೋಪವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಖಾಕಿ ಪಡೆ ಬದ್ಧತೆ ತೋರಲಿ. ಬೆಟ್ಟಿಂಗ್ ಕಿಂಗ್‌ಪಿನ್‌ಗಳ ಹೆಡೆಮುರಿಕಟ್ಟಲಿ ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.
ಈ ಹಿಂದೆ ಹಲವು ಬಾರಿ ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಾಲದ ಸುಳಿಗೆ ಸಿಲುಕಿ ಅದೆಷ್ಟೋ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಟ್ಟಿಂಗ್ ವಿಷಯಕ್ಕೆ ಜಗಳ ಆಡಿ ಜೈಲು ಸೇರಿದ ಪ್ರಕರಣಗಳೂ ವರದಿಯಾಗಿವೆ. ಬೆಟ್ಟಿಂಗ್ ಇನ್ನೂ ಹಲವರ ಪ್ರಾಣ ತೆಗೆಯುವ ಮುನ್ನವೇ ಖಾಕಿಪಡೆ ಮತ್ತಷ್ಟು ಜಾಗ್ರತೆ ವಹಿಸಬೇಕಿದೆ. ಈ ಬಗ್ಗೆ ಪಾಲಕರೂ ಎಚ್ಚರಿಕೆ ವಹಿಸಬೇಕು, ಮಕ್ಕಳ ಚಲನವಲನದ ಬಗ್ಗೆ ಗಮನಹರಿಸಬೇಕು ಎಂಬುದು ‘ವಿಜಯವಾಣಿ’ ಕಳಕಳಿ.
ಐಪಿಎಲ್ ಸಂಭ್ರಮಿಸಲು ಜಿಲ್ಲೆಯ ಕೆಲ ಹೋಟೆಲ್, ಕ್ಲಬ್, ಲಾಡ್ಜ್, ಬಾರ್, ರೆಸ್ಟೋರೆಂಟ್‌ಗಳು ಸಜ್ಜಾಗಿವೆ. ಕ್ರಿಕೆಟ್ ವೀಕ್ಷಣೆಗೆ ದೊಡ್ಡ ಟಿವಿ ಪರದೆ ಅಳವಡಿಸುವ ಮೂಲಕ ಪ್ರೇಕ್ಷಕರನ್ನು, ಗ್ರಾಹಕರನ್ನು ಸೆಳೆಯಲು ಮಾಲೀಕರು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ 2024ರಲ್ಲಿ 14, 2025ರಲ್ಲಿ 7 ಕ್ರಿಕೆಟ್ ಬೆಟ್ಟಿಂಗ್ ಕೇಸ್ ದಾಖಲಾಗಿದ್ದವು. ಇದಕ್ಕೆ ಕಡಿವಾಣ ಹಾಕಲು ಈ ಹಿಂದೆ ಬೆಟ್ಟಿಂಗ್ ಕೇಸ್‌ನಲ್ಲಿ ದಾಖಲಾಗಿದ್ದ ಆರೋಪಿತರನ್ನು ಕರೆಸಿ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಹಾವೇರಿ ಸಿಇಎನ್ ಪೊಲೀಸರು ಸೇರಿದಂತೆ ಎಲ್ಲ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಎಲ್ಲೆಡೆ ನಿಗಾ ವಹಿಸಿ ಬೆಟ್ಟಿಂಗ್ ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚಿಸಿದ್ದಾರೆ.