sp, ganja cases, 
ಹಾವೇರಿ

15 ತಿಂಗಳಲ್ಲಿ 15 ಗಾಂಜಾ ಪ್ರಕರಣ ಪತ್ತೆ ; 43 ಆರೋಪಿತರ ಬಂಧನ, 63 ಕೆಜಿ ಗಾಂಜಾ ಜಪ್ತಿ; 33 ಜನರ ವಿರುದ್ಧ ಸೇವನೆ ಕೇಸ್ ದಾಖಲು

ಕೇಶವಮೂರ್ತಿ ಬೇಲೂರಪ್ಪನವರ
ಹಾವೇರಿ: ಜಿಲ್ಲೆಯಲ್ಲಿ ಕಳೆದ 15 ತಿಂಗಳಲ್ಲಿ 15 ಗಾಂಜಾ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು ಗಾಂಜಾ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಆರೋಪದಡಿ 43 ಆರೋಪಿತರನ್ನು ಬಂಧಿಸಿ, 22 ಲಕ್ಷ ರೂ. ಮೌಲ್ಯದ 63 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. 33 ಜನರ ವಿರುದ್ಧ ಗಾಂಜಾ ಸೇವನೆ ಪ್ರಕರಣ ದಾಖಲಿಸಿದ್ದಾರೆ.
2025ರಲ್ಲಿ 10 ಗಾಂಜಾ ಪ್ರಕರಣಗಳು ದಾಖಲಾಗಿದ್ದು, 29 ಆರೋಪಗಳನ್ನು ಬಂಧಿಸಲಾಗಿತ್ತು. 11.34 ಲಕ್ಷ ರೂ. ಮೌಲ್ಯದ 40.20 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. 15 ಜನರ ವಿರುದ್ಧ 9 ಗಾಂಜಾ ಸೇವನೆ ಪ್ರಕರಣ ದಾಖಲಿಸಿದ್ದಾರೆ ಪೊಲೀಸರು.
2026ರಲ್ಲಿ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಹಾವೇರಿ ಶಹರ ಠಾಣೆಯಲ್ಲಿ 2, ರಾಣೆಬೆನ್ನೂರ ಶಹರ ಠಾಣೆಯಲ್ಲಿ 1, ರಾಣೆಬೆನ್ನೂರ ಗ್ರಾಮೀಣ ಠಾಣೆಯಲ್ಲಿ 1, ತಡಸ ಠಾಣೆಯಲ್ಲಿ 1 ಪ್ರಕರಣ ಸೇರಿ 5 ಪ್ರಕರಣ ದಾಖಲಿಸಿದ್ದಾರೆ. 14 ಜನರನ್ನು ಬಂಧಿಸಿ, 10.58 ಲಕ್ಷ ರೂ. ಮೌಲ್ಯದ 22.85 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ. 18 ಜನರ ವಿರುದ್ಧ 13 ಗಾಂಜಾ ಸೇವನೆ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಗಾಂಜಾ ಮಾರಾಟ, ಸಾಗಾಟ ಕೇಸ್‌ಗಳ ಜತೆಗೆ ಗಾಂಜಾ ಸೇವನೆ ಪ್ರಕರಣಗಳೂ ಹೆಚ್ಚುತ್ತಿದ್ದು, ಈ ಬಗ್ಗೆ ಮತ್ತಷ್ಟು ನಿಗಾ ವಹಿಸುವ ಅಗತ್ಯವಿದೆ. ಕಾಲೇಜ್‌ಗಳ ಸುತ್ತಮುತ್ತ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಹೋರಿ ಹಬ್ಬ, ಟಗರು ಕಾಳಗದ ನೆಪದಲ್ಲೂ ಗಾಂಜಾ ಸಾಗಣೆ ಮಾಡುತ್ತಿರುವ ಆರೋಪಗಳೂ ಹೆಚ್ಚಾಗಿವೆ.
ಬಾಲ್ಯ ಸ್ನೇಹಿತರು ಡ್ರಗ್ಸ್ ಕೇಸಲ್ಲಿ ಲಾಕ್
ಇಲ್ಲಿನ ನಾಗೇಂದ್ರನಮಟ್ಟಿಯ ದಿಳ್ಳೆಪ್ಪ ಮಲ್ಲಪ್ಪ ಅಳಲಗೇರಿ ಮತ್ತು ರಾಜಾಸಾಬ ಬಾಬುಸಾಬ ನದಾಫ್ ಇಬ್ಬರೂ ಬಾಲ್ಯ ಸ್ನೇಹಿತರು ಮಾ.16ರಂದು ಗಾಂಜಾ ಸಾಗಣೆ ಕೇಸ್‌ನಲ್ಲಿ ಲಾಕ್ ಆಗಿದ್ದಾರೆ. 10.77 ಕೆಜಿ ಗಾಂಜಾ ಸಾಗಿಸುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕುರಿ ಸಾಕಿಕೊಂಡಿದ್ದ ದಿಳ್ಳೆಪ್ಪ ಈ ಹಿಂದೆ ಗಾಂಜಾ ಕೇಸ್ ಒಂದರಲ್ಲಿ ಬಂಧಿತನಾಗಿದ್ದ. ಈತನ ಸ್ನೇಹಿತ, ಖಾಸಗಿ ಕಂಪನಿಯೊಂದರಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ರಾಜಾಸಾಬ ನದಾಫ್ ಇಬ್ಬರೂ ಬಾಲ್ಯ ಸ್ನೇಹಿತರು. ಹಣಕಾಸಿನ ತೊಂದರೆ ಹಾಗೂ ಶೀಘ್ರದಲ್ಲೇ ಹಣ ಮಾಡಲು ಹೋಗಿ ಈಗ ಕಂಬಿ ಎಣಿಸುತ್ತಿದ್ದಾರೆ.
ಓಡಿಶಾದಿಂದ ಗಾಂಜಾ ಖರೀದಿಸಿದ್ದ ಸ್ನೇಹಿತರು, ಪ್ರೆಸ್ಸಿಂಗ್ ಮಷಿನ್‌ನಲ್ಲಿ ಒತ್ತಿಸಿ, ವಾಸನೆ ಬರದಂತೆ ತಡೆಯಲು ಅದಕ್ಕೆ ಬಟ್ಟೆ ಸುತ್ತಿ ಗಮ್ ಟೇಪ್ ಅಂಟಿಸಿಕೊಂಡು ರೈಲಿನಲ್ಲಿ ತಂದಿದ್ದರು. ತಿರುಪತಿ, ಬೆಂಗಳೂರು ಮಾರ್ಗವಾಗಿ ಹಾವೇರಿಗೆ ರೈಲಿನಲ್ಲಿ ಬಂದಿದ್ದರು. ನಾಗೇಂದ್ರನಮಟ್ಟಿಯ ಹೊಸಕೇರಿ ಮಠದ ಬಳಿ ನಿರ್ಮಾಣವಾಗುತ್ತಿರುವ ಸಾಯಿ ಲೇಔಟ್‌ನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಶಹರ ಠಾಣೆ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ನೇತೃತ್ವದ ತಂಡ ದಾಳಿ ಮಾಡಿ, ಇಬ್ಬರನ್ನು ಬಂಧಿಸಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ ಎಂದು ಎಸ್‌ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.
"

ಗಾಂಜಾ ಪ್ರಕರಣಗಳ ಕುರಿತು ಜಿಲ್ಲೆಯಾದ್ಯಂತ ವಿಶೇಷ ನಿಗಾ ವಹಿಸಲಾಗಿದ್ದು, ಮಾಹಿತಿ ತಿಳಿದ ಕೂಡಲೇ ನಮ್ಮ ಅಧಿಕಾರಿಗಳು, ಸಿಬ್ಬಂದಿ ದಾಳಿ ನಡೆಸುತ್ತಿದ್ದಾರೆ. ಗಾಂಜಾ ಹೊರತುಪಡಿಸಿ ಬೇರೆ ಡ್ರಗ್ಸ್ ಬಳಕೆ ಕಂಡುಬಂದಿಲ್ಲ. ಇದರ ಪರಿಣಾಮವಾಗಿ ಹಲವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಸಾರ್ವಜನಿಕರೂ ಗಾಂಜಾ ಕೇಸ್‌ಗಳ ಬಗ್ಗೆ ಮಾಹಿತಿ ಇದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.