Haveri, SLV, Mhila Mart, Fraud, 6.49 Crore, 470 Ladies,  
ಹಾವೇರಿ

ಎಸ್‌ಎಲ್‌ವಿ ಕಂಪನಿಯಿಂದ 6.49 ಕೋಟಿ ವಂಚನೆ !; ಮಹಿಳೆಯರೇ ಇವರ ಟಾರ್ಗೆಟ್; 470 ಜನರಿಗೆ ವಂಚನೆ, ಶಹರ ಠಾಣೆಯಲ್ಲಿ ಎಫ್‌ಐಆರ್

ಹಾವೇರಿ: ನಿರುದ್ಯೋಗಿ ಮಹಿಳೆಯರಿಗೆ ವರ್ಕ್ ಫ್ರಮ್ ಹೋಮ್ ಕೆಲಸ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಡೆಪಾಸಿಟ್ ಪಡೆದು ವಂಚಿಸಿದ್ದ ಇಲ್ಲಿನ ಅಶ್ವಿನಿನಗರದ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಕಂಪನಿ 470 ಮಹಿಳೆಯರಿಗೆ 6.49 ಕೋಟಿ ರೂ. ವಂಚಿಸಿದ್ದು, ಕಂಪನಿ ವಿರುದ್ಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಊದಬತ್ತಿ, ಮೇಣದ ಬತ್ತಿ, ಕರ್ಪೂರ, ಧೂಪ, ಇತರೆ ಸಾಮಗ್ರಿಗಳನ್ನು ಕೊಡುತ್ತೇವೆ. ನೀವು ಅದನ್ನು ಮನೆಯಲ್ಲೇ ಪ್ಯಾಕಿಂಗ್ ಮಾಡಿಕೊಡಬೇಕು. ರಾಜ್ಯದಲ್ಲಿ ನಮ್ಮದು 9 ಶಾಖೆಗಳಿವೆ. ಕನಿಷ್ಠ 25 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೆ ಡೆಪಾಸಿಟ್ ಇಡಬೇಕು. ಒಂದು ಲಕ್ಷಕ್ಕೆ ಪ್ರತಿ ತಿಂಗಳಿಗೆ 26 ಸಾವಿರ ರೂ. ಆದಾಯ ಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದರು. ಆರಂಭದಲ್ಲಿ 2, 3 ತಿಂಗಳವರೆಗೆ ಲಾಭದ ಹಣವನ್ನು ಸದಸ್ಯರ ಖಾತೆಗೆ ವರ್ಗಾಯಿಸಿ ನಂಬಿಕೆ ಬರುವಂತೆ ಮಾಡಿದ್ದಾರೆ.
ಹಣ ಬರುತ್ತಿದ್ದಂತೆ ಆಮಿಷಕ್ಕೆ ಒಳಗಾದ ಬಹುತೇಕ ಜನರು ಬಂಗಾರ, ಮನೆ ಅಡ ಇಟ್ಟು, ಸಾಲ ತೆಗೆದುಕೊಂಡು ಬಂದು ಎಸ್‌ಎಲ್‌ವಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಒಬ್ಬೊಬ್ಬರು ಕನಿಷ್ಠ 25 ಸಾವಿರ, 1 ಲಕ್ಷದಿಂದ ಹಿಡಿದು 5, 6 ಲಕ್ಷ ರೂ.ವರೆಗೆ ಡೆಪಾಸಿಟ್ ಮಾಡಿರುವವರೂ ಇದ್ದಾರೆ. ವಂಚಕ ವಿನಾಯಕ ಆನ್ವೇರಿ ಹಾಗೂ ತಂಡ ಕಳೆದ ಎರಡು ವಾರದಿಂದಲೇ ಅಶ್ವಿನಿನಗರದ ಕಚೇರಿಗೆ ಬೀಗ ಹಾಕಿ ತಲೆಮರೆಸಿಕೊಂಡಿದೆ. ಈ ತಂಡವನ್ನು ಬಂಧಿಸಿ, ನಮ್ಮ ಹಣ ವಾಪಸ್ ಕೊಡಿಸಿ ಎಂದು ವಂಚನೆಗೀಡಾದ ನೂರಾರು ಮಹಿಳೆಯರು, ಕುಟುಂಬದವರು ಜೂನ್ 10ರಂದು ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಈ ಕೂಡಲೇ ಆರೋಪಿತರನ್ನು ಬಂಧಿನಿ, ನಮ್ಮ ಹಣ ವಾಪಸ್ ಕೊಡಿಸಬೇಕು ಎಂದು ಮೋಸ ಹೋಗಿರುವವರು ಆಗ್ರಹಿಸಿದ್ದಾರೆ.
ವಿನಾಯಕ ಆನ್ವೇರಿ ಆ್ಯಂಡ್ ಟೀಂ ನಾಪತ್ತೆ
ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದ ವಿನಾಯಕ ಆನ್ವೇರಿ ಎ1 ಆರೋಪಿಯಾಗಿದ್ದು ಈತನೇ ವ್ಯವಹಾರದ ಕಿಂಗ್‌ಪಿನ್ ಎನ್ನಲಾಗಿದೆ. ಈತನ ಜತೆ ತುಮಕೂರಿನ ರಮ್ಯಾ ಜಿ., ನೆಲೋಗಲ್ಲನ ವೀರೇಶ ಕರಬಸಪ್ಪ ಆನ್ವೇರಿ, ರಮ್ಯಾ ವೀರೇಶ ಆನ್ವೇರಿ, ಜಯಶ್ರೀ ಕರಬಸವ್ವ ಆನ್ವೇರಿ, ಮಂಜುನಾಥ ಆನ್ವೇರಿ, ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರು ನಾಪತ್ತೆಯಗಿದ್ದು, ಇವರ ಪತ್ತೆಗೆ ಖಾಕಿಪಡೆ ಬಲೆ ಬೀಸಿದೆ. ಬಾಕ್ಸ್ ಯಾವುದೇ ಅನುಮತಿ ಪಡೆದಿಲ್ಲ ಸರ್ಕಾರದಿಂದ ಯಾವುದೇ ಅಧಿಕೃತ ಅನುಮತಿ ಪಡೆಯದೇ ಆರೋಪಿತರು ಜನರಿಗೆ ವಂಚಿಸುವ ಉದ್ದೇಶದಿಂದ ಹಾವೇರಿಯ ಅಶ್ವಿನಿನಗರ 1ನೇ ಕ್ರಾಸ್‌ನಲ್ಲಿ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಹೆಸರಲ್ಲಿ ಕಚೇರಿ ತೆರೆದಿದ್ದರು. ಸೆಪ್ಟೆಂಬರ್ 1, 2025ರಿಂದ ಜೂನ್ 3, 2026ರ ಅವಧಿಯಲ್ಲಿ ಕಾನೂನು ಬಾಹಿರವಾಗಿ 1 ಲಕ್ಷ ಡೆಪಾಸಿಟ್ ಇಟ್ಟರೆ ತಿಂಗಳಿಗೆ 20ರಿಂದ 28 ಸಾವಿರ ರೂ. ಕೊಡುತ್ತೇವೆ ಎಂದು ನಂಬಿಸಿ 477 ಜನರಿಂದ 6,49,45,000 ರೂ. ಪಡೆದು ವಂಚಿಸಿದ್ದಾರೆ. ಜಿಲ್ಲೆ ಮಾತ್ರವಲ್ಲದೇ ಹೊರಜಿಲ್ಲೆಗಳ ಜನರಿಗೂ ವಂಚಿಸಿದ್ದಾರೆ. ಕಾನೂನು ಬಾಹಿರವಾಗಿ ವ್ಯವಹಾರ ನಡೆಸಿದ್ದಲ್ಲದೇ, ಮಹತ್ವದ ಮಾಹಿತಿಗಳು ಹಾಗೂ ಸಾಕ್ಷಾಧಾರಗಳು ಸಿಗದಂತೆ ಆಫೀಸಿನಲ್ಲಿದ್ದ ಎಲ್ಲ ವಸ್ತುಗಳೂ ಹಾಗೂ ದಾಖಲೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಅಶ್ವಿನಿನಗರದ ನಿವಾಸಿ ನವ್ಯಾ ಮಂಜುನಾಥ ಅರಳಿಕಟ್ಟಿ ಹಾಗೂ ವಂಚನೆಗೀಡಾದವರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೆಪಿಐಡಿ ಕಾಯ್ದೆ 2004, ಬಡ್ಸ್ ಕಾಯ್ದೆ 2019 ಹಾಗೂ ಬಿಎನ್‌ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಕ್ಸ್ ಕಚೇರಿ ಮೇಲೆ ನೋಟಿಸ್ ಅಂಟಿಸಿ ಪರಾರಿ ಆಡಿಟ್ ಕಾರ್ಯ ಪೂರ್ಣಗೊಳ್ಳದ ಕಾರಣ ಏಪ್ರಿಲ್ ತಿಂಗಳ ಹಣ ಖಾತೆಗೆ ವರ್ಗಾವಣೆ ಮಾಡಲು ತಡವಾಗಿದೆ. ಆಡಿಟ್ ತಡ ಆಗಿದ್ದರಿಂದ ಎಸ್‌ಎಲ್‌ವಿ ಮಹಿಳಾ ಮಾರ್ಟ್‌ನ ಖಾತೆಗಳು ಫ್ರೀಜ್ ಆಗಿವೆ. ಕಾರಣ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ. ಜೂನ್ 10ರ ನಂತರ ವರ್ಗಾಯಿಸಲಾಗುವುದು ಎಂದು ಕಂಪನಿ ಮುಖ್ಯಸ್ಥ ರಾಜೇಶ ಬೊಮ್ಮಲು (ಎಂಡಿ) ಗೂಗಲ್ ಮೀಟ್ ಮೂಲಕ ತಿಳಿಸಿದ್ದಾರೆ. ಹಾಗಾಗಿ, ಜೂನ್ 10ರವರಗೆ ಕಚೇರಿ ಬಂದ್ ಮಾಡಲಾಗುವುದು. ನಂತರ ಹಣ ಕೊಡಲಾಗುವುದು. ಗ್ರಾಹಕರು ಸಹಕರಿಸಬೇಕು ಎಂದು ಕಚೇರಿ ಮೇಲೆ ನೋಟಿಸ್ ಅಂಟಿಸಿ ಪರಾರಿಯಾಗಿದ್ದಾರೆ.
"

ಎಸ್‌ಎಲ್‌ವಿ ಮಹಿಳಾ ಮಾರ್ಟ್ ವಿರುದ್ಧ ಬೆಂಗಳೂರು, ತುಮಕೂರು ಸೇರಿದಂತೆ ವಿವಿಧೆಡೆ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಶಹರ ಠಾಣೆಯಲ್ಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಆರೋಪಿತರ ಬಂಧನದ ಬಳಿಕ ಹೆಚ್ಚಿನ ಮಾಹಿತಿ ದೊರೆಯುತ್ತದೆ.

— ಮೋತಿಲಾಲ ಪವಾರ, ಇನ್‌ಸ್ಪೆಕ್ಟರ್, ಹಾವೇರಿ ಶಹರ ಠಾಣೆ