Haveri, SLV Mahila Mart, Fraud, 10 Crores, Town Station,
ಹಾವೇರಿ: ಇಲ್ಲಿನ ಅಶ್ವಿನಿನಗರದಲ್ಲಿ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್’ ಹೆಸರಲ್ಲಿ ಕಚೇರಿ ತೆರೆದು, ವರ್ಕ್ ಫ್ರಮ್ ಹೋಮ್ ಉದ್ಯೋಗ ಕೊಡುವುದಾಗಿ ನಂಬಿಸಿ, ನೂರಾರು ಮಹಿಳೆಯರಿಂದ ಕೋಟ್ಯಂತರ ರೂ. ಡೆಪಾಸಿಟ್ ಪಡೆದು ವಂಚಿಸಿ, ಪರಾರಿಯಾಗಿದ್ದಾರೆಂದು ಆರೋಪಿಸಿ ನೊಂದ ಮಹಿಳೆಯರು ಮಂಗಳವಾರ ಹಾವೇರಿ ಶಹರ ಠಾಣೆಗೆ ಧಾವಿಸಿದ್ದರು.
ನಗರದ ಶಹರ ಪೊಲೀಸ್ ಠಾಣೆ ಎದುರು ಮಂಗಳವಾರ ಜಮಾಯಿಸಿದ್ದ ನೊಂದ ಮಹಿಳೆಯರು ನ್ಯಾಯ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದರು. ಹಾವೇರಿ ತಾಲೂಕು ನೆಲೋಗಲ್ಲ ಗ್ರಾಮದ ವಿನಾಯಕ ಆನ್ವೇರಿ ಎಂಬಾತ ಕೋಟ್ಯಂತರ ರೂಪಾಯಿ ವಂಚಿಸಿರುವ ವಂಚಕ ನಾಪತ್ತೆಯಾಗಿದ್ದು, ಆತನನ್ನು ಬಂಧಿಸಿ ಹಣ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು.
ಊದಬತ್ತಿ, ಮೇಣದ ಬತ್ತಿ, ಕರ್ಪೂರ, ಧೂಪ, ಇತರೆ ಸಾಮಗ್ರಿಗಳನ್ನು ಕೊಡುತ್ತೇವೆ. ನೀವು ಅದನ್ನು ಮನೆಯಲ್ಲೇ ಪ್ಯಾಕಿಂಗ್ ಮಾಡಿಕೊಡಬೇಕು. ರಾಜ್ಯದಲ್ಲಿ ನಮ್ಮದು 9 ಶಾಖೆಗಳಿವೆ. ಕನಿಷ್ಠ 25 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೆ ಡೆಪಾಸಿಟ್ ಇಡಬೇಕು. ಒಂದು ಲಕ್ಷಕ್ಕೆ ಪ್ರತಿ ತಿಂಗಳಿಗೆ 26 ಸಾವಿರ ರೂ. ಆದಾಯ ಕೊಡುತ್ತೇವೆ ಎಂದು ನಂಬಿಸಿದ್ದರು. ನಾನು ಮೊದಲು ಒಂದು ಲಕ್ಷ ರೂ. ಡೆಪಾಸಿಟ್ ಮಾಡಿದ್ದೆ. ನಾಲ್ಕೈದು ತಿಂಗಳು ಹಣ ಕೊಟ್ಟರು. ನಂತರ ಮತ್ತೆ ಎರಡು ಲಕ್ಷ ರೂ. ಪಾವತಿಸಿದ್ದೆ. ಆಗ ಒಂದು ರೂ. ಕೊಡದೇ ವಂಚಿಸಿದ್ದಾರೆ ಎಂದು ರಾಣೆಬೆನ್ನೂರ ತಾಲೂಕಿನ ಜೋಯಿಸರಹರಳಹಳ್ಳಿಯ ಶಂಕ್ರಮ್ಮ ಆರೋಪಿಸಿದರು.
ಈ ಸಂಸ್ಥೆಯಿಂದ ಅಂದಾಜು 8ರಿಂದ 10 ಕೋಟಿ ರೂ. ವಂಚಿಸಿರುವ ಆರೋಪ ಕೇಳಿ ಬಂದಿದೆ. ನೊಂದವರಿಗೆ ನ್ಯಾಯ ಕೊಡಿಸುವಂತೆ ಶಹರ ಪೊಲೀಸ್ ಠಾಣೆಗೆ ದೂರು ನೀಡಲಾಗುತ್ತಿದೆ ಎಂದು, ಬ್ಯಾಡಗಿ ವಕೀಲ ನವೀನ ಮುಳಗುಂದ ಹಾಗೂ ಮಂಜುನಾಥ ಅರಳಿಕಟ್ಟಿ ತಿಳಿಸಿದರು. ಆರೋಪಿ ವಿನಾಯಕ ಆನ್ವೇರಿಯನ್ನು ಕೂಡಲೇ ಬಂಧಿಸಿ, ನೊಂದವರಿಗೆ ಹಣ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು. ದಾಖಲೆ ಸಮೇತ ದೂರು ನೀಡುವಂತೆ ತಿಳಿಸಿದ್ದು, ದೂರು ನೀಡಿದ ಕೂಡಲೇ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.