sindhagi matha, jatra 
ಹಾವೇರಿ

ಶ್ರೀ ಸಿಂದಗಿ ಶಾಂತವೀರೇಶ್ವರರ ಪುಣ್ಯ ಸ್ಮರಣೋತ್ಸವದ 11ರಿಂದ; ನಿತ್ಯ ಸಂಜೆ ಪ್ರವಚನ, ಧಾರ್ಮಿಕ ಕಾರ್ಯಕ್ರಮ, 28ರಂದು ಊರೂಟ

ಹಾವೇರಿ: ನಗರದ ಪ್ರಸಿದ್ಧ ಸಿಂದಗಿ ಮಠದ ಶ್ರೀ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ 46ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ಸಿಂದಗಿ ಮಠದಲ್ಲಿ ಫೆ.11ರಿಂದ ಫೆ.17ರವರೆಗೆ ಗದಗಿನ ಜಗದ್ಗುರು ಡಾ.ತೋಟದ ಸಿದ್ದರಾಮ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಫೆ.11ರಂದು ಸಂಜೆ 7.30ಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮುಧೋಳ ಸಿದ್ದಾರೂಢ ಶಿವಯೋಗಾಶ್ರಮದ ಸಿದ್ದರಾಮ ಸ್ವಾಮೀಜಿ ಅವರಿಂದ ಪ್ರತಿದಿನ ಮಹಾತ್ಮರ ಜೀವನದರ್ಶನ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಗದಗ ವಿರೇಶ್ವರ ಪುಣ್ಯಾಶ್ರಮದ ಸಂಗಮೇಶ ಪಾಟೀಲ ಸಂಗೀತ, ತೋಟೇಂದ್ರಕುಮಾರ ಕರಡಕಲ್ಲ ತಬಲಾಸಾಥ್ ನೀಡಲಿದ್ದಾರೆ.
ಫೆ.12ರಂದು ಸಂಜೆ 7.30ಕ್ಕೆ ನಡೆಯುವ ಪ್ರವಚನದಲ್ಲಿ ಕುಂದಗೋಳ ಕಲ್ಯಾಣಪುರಮಠದ ತ್ರಿವಿಧ ದಾಸೋಹಿ ಅಭಿನವ ಬಸವಣ್ಣಜ್ಜನವರು ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರದುರ್ಗದ ಕು.ಶಾಲೋಮ್‌ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಫೆ.13ರಂದು ಬೆಳಗ್ಗೆ 10.30ಕ್ಕೆ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ಅನುಭವಿಕ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ಸಂಜೆ 7.30ರ ಪ್ರವಚನದಲ್ಲಿ ಶೇಡಂನ ಹಾಲಪ್ಪಯ್ಯನ ಮಠದ ಪಂಚಾಕ್ಷರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರೇಬಾಗೇವಾಡಿಯ ಲಾವಣ್ಯ ಅಂಗಡಿ ಬಾಲಪ್ರತಿಭೆಯಿಂದ ವಚನಪಠಣ ನಡೆಯಲಿದೆ.
ಫೆ.14ರಂದು ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯ ಜಯಪ್ರಿಯ ಕಣ್ಣಿನ ಆಸ್ಪತ್ರೆಯ ಡಾ.ವೆಂಕಟರಾಮ್ ಕಟ್ಟಿ ಹಾಗೂ ಹಾವೇರಿ ಸೃಜನ್ ಆಫ್ಟಿಕಲ್ ಸಹಯೋಗದೊಂದಿಗೆ ಉಚಿತ್ರ ನೇತ್ರ ತಪಾಸಣಾ ಶಿಬಿರ ಜರುಗಲಿದೆ. ಸಂಜೆ 7.30ರ ಪ್ರವಚನ ಕಾರ್ಯಕ್ರಮದಲ್ಲಿ ಮಣಕವಾಡ ಅನ್ನದಾನೀಶ್ವರಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ವಿರೇಶ್ವರ ಪುಣ್ಯಾಶ್ರಮದ ರಾಹುಲ ರಾಠೋಡ ಅವರಿಂದ ವಿಶೇಷ ಸಂಗಿತ ಕಾರ್ಯಕ್ರಮ ನಡೆಯಲಿದೆ.
ಫೆ.15ರಂದು ರಾತ್ರಿ 8.30ಕ್ಕೆ ಮಹಾ ಶಿವರಾತ್ರಿ ನಿಮಿತ್ಯ ನಡೆಯುವ ಕಾರ್ಯಕ್ರಮದಲ್ಲಿ ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಅಧ್ಯಕ್ಷತೆ ವಹಿಸಲಿದ್ದು, ಅನಿಲ ಮಠಪತಿ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದೆ. ಫೆ.16ರ ಸಂಜೆ 7.30ಕ್ಕೆ ಜರುಗುವ ಕಾರ್ಯಕ್ರಮದಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ದಾವಣಗೇರಿ ವಿರೇಶ್ವರ ಪುಣ್ಯಾಶ್ರಮದ ಆನಂದ ಪಾಟೀಲರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಗಣ್ಯರಿಗೆ ಸನ್ಮಾನ ಜರುಗಲಿದೆ.
ಫೆ.17ರಂದು ಬೆಳಗ್ಗೆ ಗುರುಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ದಾಸೋಹ ಹಾಗೂ ಸ್ಮರಣೋತ್ಸವ ಜರುಗಲಿದೆ. ಗದಗಿನ ಲಿಂ.ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿಯವರ ಪುಣ್ಯಸ್ಮರಣೆ ನಡೆಯಲಿದೆ. ಸಂಜೆ 7.30ಕ್ಕೆ ಡಂಬಳದ ಯಡಿಯೂರ ತೋಂಟದಾರ್ಯಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರವಚನ ಮಂಗಲಗೊಳ್ಳಲಿದೆ. ಕೂಡ್ಲಿಗಿಯ ಅಂತಾರಾಷ್ಟ್ರೀಯ ಕಲಾವಿದರಾದ ಕೋಗಳಿ ಕೊಟ್ರೇಶ ಅವರಿಂದ ವಿಶೇಷ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಫೆ.28ರಂದು ಸಂಜೆ 7.30ಕ್ಕೆ ಊರೂಟ ನೆರವೇರಲಿದೆ ಎಂದು ಸಿಂದಗಿಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.