Haveri, Shiggavi, Tadas, Tover, Falldown, On Truck,  
ಹಾವೇರಿ

ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ಟಾವರ್; ಭಾರೀ ಮಳೆ, ಗಾಳಿ ವೇಳೆ ಅವಘಡ; ಲಾರಿ ಜಖಂ, ಪ್ರಾಣಾಪಾಯದಿಂದ ಚಾಲಕ ಪಾರು

ಹಾವೇರಿ: ಶಿಗ್ಗಾಂವ ತಾಲೂಕಿನ ಕಡಹಳ್ಳಿ- ತಡಸ ಕ್ರಾಸ್ ಅಂಬುಜಾ ಫ್ಯಾಕ್ಟರಿ ಬಳಿ ಭಾರೀ ಮಳೆ, ಗಾಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯ ಮೇಲೆ ಮೊಬೈಲ್ ಟಾವರ್ ಉರುಳಿ ಬಿದ್ದು, ಚಾಲಕ ಗಾಯಗೊಂಡ ಘಟನೆ ಸೋಮವಾರ ಸಂಜೆ ಸಂಭವಿಸಿದೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗೋವಿಂದಪ್ಪ ಕನಕಪ್ಪ ಆಡಿನ ಗಾಯಗೊಂಡ ಚಾಲಕ.
ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಚಾಲಕ ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಭಾರೀ ಮಳೆ ಹಾಗೂ ಗಾಳಿಯಿಂದ ರಸ್ತೆ ಪಕ್ಕದಲ್ಲಿದ್ದ ಮೊಬೈಲ್ ಟಾವರ್ ಉರುಳಿ ಲಾರಿ ಮುಂಭಾಗದ ಮೇಲೆ ಬಿದ್ದಿದೆ.
ಲಾರಿ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಲಾರಿ ಮತ್ತು ಟಾವರ್ ಮಧ್ಯದಲ್ಲಿ ಸಿಲುಕಿದ್ದ ಚಾಲಕ ಗಾಯಗೊಂಡು ಒದ್ದಾಡುತ್ತಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಚಾಲಕನನ್ನು ಹೊರತೆಗೆದರು. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಗಾಯಗೊಂಡಿದ್ದ ಚಾಲಕನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಯಿತು.
ಅವಘಡದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆ ಸಂಚಾರ ದಟ್ಟಣೆ ಉಂಟಾಗಿತ್ತು. ಲಾರಿ ತೆರುಗೊಳಿಸಿದ ನಂತರ ಸಂಚಾರ ಸುಗಮಗೊಂಡಿತು. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.